ನೇಪಾಳದಲ್ಲಿ ಭುಗಿಲೆದ್ದ ಜನಾಕ್ರೋಶ: ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿದ ಕನ್ನಡಿಗ ಪ್ರವಾಸಿಗರು

ಬೆಂಗಳೂರು: 26 ಆ್ಯಪ್ಗಳ ನಿಷೇಧದ ಬೆನ್ನಲ್ಲೇ ಭುಗಿಲೆದ್ದ ಜನಾಕ್ರೋಶಕ್ಕೆ ಎರಡೇ ದಿನದಲ್ಲಿ ನೇಪಾಳ ಅಕ್ಷರಶಃ ಹೊತ್ತಿ ಉರಿದಿದೆ. ಸರ್ಕಾರವೇ ಪತನವಾಗಿದೆ. ಸೋಶಿಯಲ್ ಮೀಡಿಯಾ ಬ್ಯಾನ್ ಆದೇಶ ಹಿಂಪಡೆದರೂ ಜನಾಕ್ರೋಶ ಮಾತ್ರ ಕಮ್ಮಿಯಾಗಿಲ್ಲ. ಈ ಮಧ್ಯೆ ಹಿಮಾಲಯಕ್ಕೆ ಆಧ್ಯಾತ್ಮಿಕ ಪ್ರಯಾಣ ಬೆಳೆಸಿದ್ದ ಕರ್ನಾಟಕ ಮೂಲದ ದಂಪತಿ ನೇಪಾಳ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವುದಾಗಿ ವರದಿ ಆಗಿದೆ.

ಇಶಾ ಫೌಂಡೇಶನ್‌ನಿಂದ 130 ಜನರೊಂದಿಗೆ ಬೆಂಗಳೂರಿನ ರಜನಿ ಮಸ್ಕಿ ಮತ್ತು ರಘುವೀರ್ ಯಾವಗಲ್ ದಂಪತಿ ಮಾನಸಸರೋವರಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ ಸದ್ಯ ನೇಪಾಳದಲ್ಲಿ ಭುಗಿಲೆದ್ದಿರುವ ಉದ್ವೇಗದಿಂದಾಗಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 24 ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಳ್ಳುವಂತಾಗಿದೆ.
ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ರಜನಿ ಹೇಳಿದ್ದಿಷ್ಟು
ಈ ಕುರಿತಾಗಿ ರಜನಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ‘ನಮಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ನಮ್ಮನ್ನು ಹೊರಗೆ ಬಿಡುತ್ತಿಲ್ಲ. ಊಟವಿಲ್ಲ, ನೀರಿಲ್ಲ ಮತ್ತು ತಿನ್ನಲು ಏನನ್ನಾದರೂ ಖರೀದಿಸಲು ಸಹ ಯಾವುದೇ ಅಂಗಡಿಗಳು ತೆರೆದಿಲ್ಲ’ ಎಂದು ಅವರು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇನ್ನು ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವವರಲ್ಲಿ ಅನೇಕರು ಕರ್ನಾಟಕದವರಿದ್ದು, ವಿಶೇಷವಾಗಿ ಬೆಂಗಳೂರಿನವರು. ಎಲ್ಲರೂ ಮನೆಗೆ ಹಿಂದಿರುಗಲು ಸಹಾಯಕ್ಕಾಗಿ ಅಂಗಲಾಚುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ರಜನಿ ಮಸ್ಕಿ ಮತ್ತು ರಘುವೀರ್ ಯಾವಗಲ್ ದಂಪತಿ ಕಳೆದ 10 ದಿನಗಳಿಂದ ನೇಪಾಳದ ಮಾನಸ ಸರೋವರದಲ್ಲಿದ್ದರು. ಆಗಸ್ಟ್ 24 ರಂದು ಬೆಂಗಳೂರಿನಿಂದ ಮಾನಸ ಸರೋವರಕ್ಕೆ ಸುಮಾರು 130 ಜನರ ಗುಂಪು ಸೋಮವಾರ ರಾತ್ರಿ 10.30 ಕ್ಕೆ ಕಠ್ಮಂಡುವಿಗೆ ಮರಳಿದ್ದರು.
200 ಜನರು ಕರ್ನಾಟಕದವರು
‘ನಾವು ರಾತ್ರಿ 10.30 ರ ಸುಮಾರಿಗೆ ಹೋಟೆಲ್ ತಲುಪಿದೆವು. ಎಲ್ಲೆಡೆ ಹೊಗೆ ತುಂಬಿತ್ತು, ಮರದ ಹಲಗೆಗಳು ಮತ್ತು ಟೈರ್‌ಗಳು ಉರಿಯುತ್ತಿದ್ದವು. ಬೀದಿಗಳಲ್ಲಿ ಹೆಚ್ಚು ಜನರಿರಲಿಲ್ಲ’ ಎಂದು ರಜನಿ ಹೇಳಿದ್ದಾರೆ. ಮರುದಿನ ಅಂದರೆ ಮಂಗಳವಾರ ಬೆಂಗಳೂರಿಗೆ ಮಧ್ಯಾಹ್ನ 1 ಗಂಟೆಗೆ ವಿಮಾನ ಇದ್ದಿದ್ದರಿಂದ ಅವರು ಏರ್ಪೋರ್ಟ್ಗೆ ತೆರಳಿದರು. ಆದರೆ ಅಷ್ಟರಲ್ಲಿ ಗೇಟ್‌ಗಳು ಮುಚ್ಚಲಾಗಿತ್ತು. ವಿಮಾನಗಳು ರದ್ಧಾಗಿರುವುದನ್ನು ತಿಳಿದು ಬೇಸರಗೊಂಡಿದ್ದಾರೆ. ರಜನಿ ಅವರ ಪ್ರಕಾರ, ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ಸಾವಿರಾರು ಜನರಿದ್ದು, ಅದರಲ್ಲಿ ಸುಮಾರು 200 ಜನರು ಕರ್ನಾಟಕದವರು.
ಕನ್ನಡಿಗರನ್ನ ಸುರಕ್ಷಿತವಾಗಿ ಕರೆತರುವಂತೆ ಸಿಎಂ ಸೂಚನೆ
ಇನ್ನು ನೇಪಾಳದಲ್ಲಿ ವಿದ್ಯಾರ್ಥಿ, ಯುವಜನರ ಕ್ಷಿಪ್ರ ಬೃಹತ್ ಪ್ರತಿಭಟನೆ ಕಾರಣಕ್ಕೆ ದೇಶಾದ್ಯಂತ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಪರಿಣಾಮವಾಗಿ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಸಿಎಂ ಸಿದ್ದರಾಮಯ್ಯ, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.
ಮುಖ್ಯ ಕಾರ್ಯದರ್ಶಿ ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ವಹಿಸಿದ್ದಾರೆ. ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಪ್ರತಿಯೊಬ್ಬ ಕನ್ನಡಿಗನನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಟ್ವೀಟ್ ಮಾಡಲಾಗಿದೆ.
