UPI ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ: ಅಕ್ಟೋಬರ್‌ನಲ್ಲಿ ದಿನನಿತ್ಯದ ವಹಿವಾಟು ₹94,000 ಕೋಟಿಗೆ ಜಿಗಿತ; ಡಿಜಿಟಲ್ ಪಾವತಿ ವ್ಯವಸ್ಥೆಗೆ ಭರ್ಜರಿ ಬೇಡಿಕೆ

ನೋಟ್ ಬ್ಯಾನ್ ನಂತ್ರ ಸಾರ್ವಜನಿಕರು ನೋಟಿನಿಂದ ದೂರ ಆಗ್ತಿದ್ದಾರೆ. ಕೈನಲ್ಲಿ ಕ್ಯಾಶ್ (Cash) ಇರೋದೇ ಕಷ್ಟ. ಪರ್ಸ್ ಮರೆತು ಬಂದ್ರೂ ಟೆನ್ಷನ್ ಇಲ್ಲ. ಎಲ್ಲ ಕಡೆ ಈಗ ಆನ್ಲೈನ್ ಪೇಮೆಂಟ್ (online payment) ವ್ಯವಸ್ಥೆ ಇರೋದ್ರಿಂದ ಜನರು ಹತ್ತು ರೂಪಾಯಿ ವಸ್ತು ಖರೀದಿ ಮಾಡಿದ್ರೂ ಗೂಗಲ್ ಪೇ, ಫೋನ್ ಪೇ ಅಂತ ಮೊಬೈಲ್ ಹಿಡಿತಾರೆ. ಹಬ್ಬದ ಸೀಸನ್ ನಲ್ಲಿ ಶಾಪಿಂಗ್ ಡಬಲ್ ಆಗುತ್ತೆ. ಜನರು ನಾಲ್ಕೈದು ತಿಂಗಳು ಉಳಿಸಿದ ಹಣವನ್ನೆಲ್ಲ ಬಟ್ಟೆ, ಹೂ, ಸ್ವೀಟ್, ಹಣ್ಣು ಅಂತ ಖರೀದಿ ಮಾಡ್ತಾರೆ. ಆನ್ಲೈನ್ ಮತ್ತೆ ಆಫ್ಲೈನ್ ಎರಡರಲ್ಲೂ ಆಫರ್ ಸುರಿಮಳೆ ಆಗೋದ್ರಿಂದ ಜನರ ಖರೀದಿ, ನಿರೀಕ್ಷೆಗಿಂತ ಹೆಚ್ಚಾಗುತ್ತೆ. ಎಲ್ಲ ಪೇಮೆಂಟ್ ಆನ್ಲೈನ್ ನಲ್ಲಿ ಆಗೋದ್ರಿಂದ ಏಕೀಕೃತ ಪಾವತಿ ಇಂಟರ್ಫೇಸ್ (UPI) ವಹಿವಾಟು ಹೆಚ್ಚು ಬೇಡಿಕೆಯಲ್ಲಿತ್ತು. ಅಕ್ಟೋಬರ್ ತಿಂಗಳು ಇನ್ನೂ ಪೂರ್ತಿಯಾಗಿಲ್ಲ, ಆಗ್ಲೇ ಅಕ್ಟೋಬರ್ ತಿಂಗಳ ವರದಿ ಬಂದಿದೆ. ಅಕ್ಟೋಬರ್ ನಲ್ಲಿ ದಿನನಿತ್ಯ ಅತಿ ಹೆಚ್ಚು ಯುಪಿಐ ಪೇಮೆಂಟ್ ಆಗಿದೆ ಅಂತ ವರದಿ ಹೇಳಿದೆ.

ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಯುಪಿಐ ವಹಿವಾಟು :
ಅಕ್ಟೋಬರ್ನಲ್ಲಿ ಸರಾಸರಿ ದೈನಂದಿನ ವಹಿವಾಟು ಮೌಲ್ಯ ಸೆಪ್ಟೆಂಬರ್ಗೆ ಹೋಲಿಸಿದರೆ ಶೇ. 13 ರಷ್ಟು ಹೆಚ್ಚಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಯುಪಿಐ ವಹಿವಾಟು ದಿನಕ್ಕೆ 94,000 ಕೋಟಿಗಳನ್ನು ತಲುಪಿದೆ. ಇದಕ್ಕೆ ದೀಪಾವಳಿ ಹಾಗೂ ಜಿಎಸ್ ಟಿ (GST) ದರ ಇಳಿಕೆ ಕಾರಣ ಎನ್ನಲಾಗ್ತಿದೆ. ಇದ್ರಿಂದಲೇ ಯುಪಿಐ ತನ್ನ ಅತ್ಯಧಿಕ ಮಾಸಿಕ ಕಾರ್ಯಕ್ಷಮತೆಯನ್ನು ದಾಖಲಿಸುವ ಹಾದಿಯಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಯುಪಿಐ ವಹಿವಾಟು ವರ್ಷದಿಂದ ವರ್ಷಕ್ಕೆ ಸಾಕಷ್ಟು ಬೆಳವಣಿಗೆ ಕಾಣ್ತಿದೆ.
ವರದಿ ಪ್ರಕಾರ, ಭಾರತದಲ್ಲಿನ ಎಲ್ಲಾ ಡಿಜಿಟಲ್ ಪಾವತಿಗಳಲ್ಲಿ ಸುಮಾರು ಶೇಕಡಾ 85ರಷ್ಟು ಶಕ್ತಿಯನ್ನು ಯುಪಿಐ ಹೊಂದಿದೆ. ಈಗ ಅದ್ರ ದೈನಂದಿನ ವಹಿವಾಟು ಪ್ರಮಾಣವು ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ದೀಪಾವಳಿಯ ಮುನ್ನಾದಿನದಂದು, ಯುಪಿಐ ಒಂದೇ ದಿನದಲ್ಲಿ 740 ಮಿಲಿಯನ್ ವಹಿವಾಟುಗಳ ಸಾರ್ವಕಾಲಿಕ ಗರಿಷ್ಠವನ್ನು ದಾಖಲಿಸಿದೆ. ಇದುವರೆಗಿನ ತಿಂಗಳ ಸರಾಸರಿ ದೈನಂದಿನ ಪ್ರಮಾಣ 695 ಮಿಲಿಯನ್ ಆಗಿದ್ದು, ಸೆಪ್ಟೆಂಬರ್ನ ದಾಖಲೆಯ 654 ಮಿಲಿಯನ್ಗಿಂತ ಶೇಕಡಾ 6 ಕ್ಕಿಂತ ಹೆಚ್ಚು.
ಹಬ್ಬದ ಋತುವಿನಲ್ಲಿ ಸದಾ ಯುಪಿಐಗೆ ಬೇಡಿಕೆ ಇರುತ್ತದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಆಚರಿಸಲಾದ ದಸರಾ ಮತ್ತು ದೀಪಾವಳಿ ಎರಡೂ ಡಿಜಿಟಲ್ ಪಾವತಿ ಚಟುವಟಿಕೆಯನ್ನು ಹೆಚ್ಚಿಸಿದ್ದವು. ಈ ವರ್ಷ ದಸರಾ ಹಾಗೂ ದೀಪಾವಳಿ ಬೇರೆ ಬೇರೆ ತಿಂಗಳಿನಲ್ಲಿ ಬಂದಿದೆ. ದಸರಾ ಹಬ್ಬವನ್ನು ಸೆಪ್ಟೆಂಬರ್ನಲ್ಲಿ ಆಚರಿಸಲಾಗಿದ್ದು, ಅಕ್ಟೋಬರ್ 20 ರಂದು ದೀಪಾವಳಿ ಆಚರಿಸಲಾಗಿದೆ. ಅಕ್ಟೋಬರ್ 20 ರ ಹೊತ್ತಿಗೆ, ಈ ತಿಂಗಳು UPI ದೈನಂದಿನ ವಹಿವಾಟು ಮೌಲ್ಯ, ಆರು ಬಾರಿ 1 ಲಕ್ಷ ಕೋಟಿ ಗಡಿಯನ್ನು ದಾಟಿದೆ. ಇದು ಸೆಪ್ಟೆಂಬರ್ಗೆ ಹೋಲಿಸಿದರೆ ದಿನಗಳ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು. ಸಾಮಾನ್ಯ ತಿಂಗಳಿನಲ್ಲಿ ಯುಪಿಐ ವಹಿವಾಟು ತಿಂಗಳ ಆರಂಭದಲ್ಲಿರುತ್ತದೆ. ಸಂಬಳ ಹಾಗೂ ಇಎಂಐ ಪಾವತಿಗೆ ಹೆಚ್ಚು ಬಳಕೆಯಾಗುತ್ತದೆ. ನಂತ್ರ ಯುಪಿಐ ಪಾವತಿ ಕಡಿಮೆಯಾಗುತ್ತದೆ. ತಿಂಗಳ ಮಧ್ಯಭಾಗದ ವೇಳೆಗೆ ದೈನಂದಿನ ಮೌಲ್ಯದಲ್ಲಿ ಸುಮಾರು 60,000 ಕೋಟಿ ರೂಪಾಯಿ ಇಳಿಯುತ್ತವೆ. ಈ ಬಾರಿ ತಿಂಗಳ ಮಧ್ಯಭಾಗದಲ್ಲಿ ಇಷ್ಟೊಂದು ಏರಿಕೆ ಕಂಡಿದ್ದು, ಸಾರ್ವಕಾಲಿಕ ದಾಖಲೆ ಸ್ಥಾಪಿಸುವ ಸಾಧ್ಯತೆ ಇದೆ.