ಯುಪಿಯಲ್ಲಿ ಮತಾಂತರ ಗ್ಯಾಂಗ್ ಮಾಸ್ಟರ್ ಮೈಂಡ್: ಛಂಗೂರ್ ಬಾಬಾನಿಂದ ₹500 ಕೋಟಿ ವಿದೇಶಿ ಹಣ ಸಂಗ್ರಹ, ‘ದರಪಟ್ಟಿ’ ಬಹಿರಂಗ!

ಲಖನೌ: ಉತ್ತರ ಪ್ರದೇಶದಲ್ಲಿ ಬಂಧನಕ್ಕೊಳಗಾಗಿರುವ ಮತಾಂತರ ಗ್ಯಾಂಗ್ನ ಮಾಸ್ಟರ್ ಮೈಂಡ್ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಹಿಂದು ಯುವತಿಯರು ಮತ್ತು ಮಹಿಳೆಯರ ಮತಾಂತರಕ್ಕಾಗಿ ವಿದೇಶಗಳಿಂದ ಸುಮಾರು 500 ಕೋಟಿ ರೂ.ಗೂ ಹೆಚ್ಚಿನ ಹಣ ಸಂಗ್ರಹಿಸಿರುವ ವಿಚಾರ ತನಿಖೆಯಿಂದ ತಿಳಿದು ಬಂದಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಛಂಗೂರ್ ಬಾಬಾ 500 ಕೋಟಿ ರೂ. ಹೆಚ್ಚು ಹಣವನ್ನು ವಿದೇಶದಿಂದ ಪಡೆದಿದ್ದಾನೆ ಎಂದು ಅಂದಾಜಿಸಿದ್ದು, ಅದರಲ್ಲಿ ಇದುವರೆಗೆ 200 ಕೋಟಿ ರೂ. ಹಣದ ಮೂಲವನ್ನು ಪತ್ತೆ ಹಚ್ಚಿದ್ದಾರೆ. ಉಳಿದ 300 ಕೋಟಿ ರೂ. ಹಣ ನೇಪಾಳದ ಮೂಲಕ ವರ್ಗಾವಣೆ ಆಗಿದೆ ಎಂಬುದು ತಿಳಿದು ಬಂದಿದೆ.
ವಿದೇಶದಿಂದ ಬಂದ ಕೋಟಿ ಕೋಟಿ ಹಣದಲ್ಲಿ ಮತಾಂತರ ದಂಧೆ ನಡೆಸುತ್ತಿದ್ದ ಛಂಗೂರ್ ಬಾಬಾ ಬಲರಾಮ್ುರದ ಚಾಂದ್ ಔಲಿಯಾ ದರ್ಗಾ ಬಳಿ ಐಷಾರಾಮಿ ಬಂಗಲೆ ನಿರ್ವಿುಸಿ ವಾಸಿಸುತ್ತಿದ್ದ. ವಿದೇಶದಿಂದ ಆಮದಾದ ಮಾರ್ಬಲ್, ಪೀಠೋಪಕರಣಗಳು ಮತ್ತು ಐಷಾರಾಮಿ ಸೌಲಭ್ಯಗಳು ಬಂಗಲೆಯಲ್ಲಿದ್ದವು. ಬಂಗಲೆಯೊಳಗೆ ಯಾರೂ ನುಸುಳದಂತೆ ಎತ್ತರದ ಕಾಂಪೌಡ್ ನಿರ್ವಿುಸಿ ಅದರಲ್ಲಿ ವಿದ್ಯುತ್ ಬೇಲಿಯನ್ನೂ ಹಾಕಲಾಗಿತ್ತು. ಅಕ್ರಮವಾಗಿ ನಿರ್ವಿುಸಿದ್ದ ಬಂಗಲೆಯ ಭಾಗವನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತಾಂತರಕ್ಕೆ ದರಪಟ್ಟಿ
ಛಂಗೂರ್ ಬಾಬಾ ಒಟ್ಟು 3 ರಿಂದ 4 ಸಾವಿರ ಹಿಂದು ಯುವತಿಯರು ಮತ್ತು ಮಹಿಳೆಯರ ಮತಾಂತರದ ಗುರಿ ಹೊಂದಿದ್ದ. ಈಗಾಗಲೇ ಆತ 1500 ಜನರನ್ನು ಮತಾಂತರ ಮಾಡಿರುವ ಶಂಕೆ ಇದೆ. ವ್ಯವಸ್ಥಿತವಾಗಿ ಮತಾಂತರ ಮಾಡುತ್ತಿದ್ದ ಆತ ಇದಕ್ಕಾಗಿ ದರ ಪಟ್ಟಿಯನ್ನೇ ಸಿದ್ಧಪಡಿಸಿದ್ದ. ಹಿಂದು ಯುವತಿಯರು ಮತ್ತು ಮಹಿಳೆಯರನ್ನು ಮತಾಂತರ ಮಾಡಿಸಿದವರಿಗೆ ಆತ ಲಕ್ಷಾಂತರ ರೂ ಹಣ ನೀಡುತ್ತಿದ್ದ. ಬ್ರಾಹ್ಮಣ ಅಥವಾ ಕ್ಷತ್ರಿಯ ಮಹಿಳೆಯರನ್ನು ಮತಾಂತರ ಮಾಡಿಸಿದರೆ 15-16 ಲಕ್ಷ ರೂ. ಒಬಿಸಿ ಸಮುದಾಯವರಿಗೆ 10-12 ಲಕ್ಷ ರೂ. ಮತ್ತು ಇತರೆ ಸಮುದಾಯದ ಮಹಿಳೆಯರಿಗೆ 8-10 ಲಕ್ಷ ರೂ. ಹಣ ನಿಗದಿ ಪಡಿಸಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
100 ಕ್ಕೂ ಹೆಚ್ಚು ಖಾತೆ
ಛಂಗೂರ್ ಬಾಬಾ ಸೌದಿ ಅರೇಬಿಯಾ, ಟರ್ಕಿ, ದುಬೈ ಮತ್ತು ಪಾಕಿಸ್ತಾನದ ಮೂಲಕ ಹಣವನ್ನು ಸ್ವೀಕರಿಸಲು ನೇಪಾಳದ ನವಲ್ಪರಾಸಿ, ರೂಪಂದೇಹಿ, ಬಂಕೆ ಮತ್ತು ಕಠ್ಮಂಡು ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್ಗಳನ್ನು ತೆರೆದಿದ್ದ. ಈ ಅಕೌಂಟ್ಗಳಿಗೆ ಬರುವ ಹಣವನ್ನು ಭಾರತದ ಅಕೌಂಟ್ಗಳಿಗೆ ಅಥವಾ ಮನಿ ಟ್ರಾನ್ಸಫರ್ ವ್ಯವಸ್ಥೆಯ ಮೂಲಕ ವರ್ಗಾವಣೆ ಮಾಡಲಾಗುತ್ತಿತ್ತು. ನೇಪಾಳಕ್ಕೆ ಹೊಂದಿಕೊಂಡಂತಿರುವ ಉತ್ತರ ಪ್ರದೇಶದ ಜಿಲ್ಲೆಗಳು ಹಾಗೂ ಬಿಹಾರದ ಮಧುಬನಿ, ಸೀತಾಗಢಿ, ಪೂರ್ನಿಯಾ, ಕಿಶನ್ಗಂಜ್ ಮತ್ತು ಚಂಪಾರಣ್ ಜಿಲ್ಲೆಯಲ್ಲಿರುವ ಏಜೆಂಟರು ಶೇ. 4-5 ರಷ್ಟು ಕಮಿಷನ್ ಪಡೆದು ನೇಪಾಳದಿಂದ ಹಣವನ್ನು ವರ್ಗಾವಣೆ ಮಾಡುತ್ತಿದ್ದರು. ಛಂಗೂರ್ ಬಾಬಾನ ಆಪ್ತರ ಹೆಸರಿನಲ್ಲೂ ಹಲವು ಬ್ಯಾಂಕ್ ಖಾತೆಗಳಿದ್ದು ಅವುಗಳಿಂದಲೂ ಕೋಟಿ ಕೋಟಿ ಹಣ ವರ್ಗಾವಣೆ ಆಗಿದೆ. ಆರೋಪಿಗಳು ದುಬೈ, ಶಾರ್ಜಾ ಮತ್ತು ಯುಎಇಯ ಮಶ್ರೆಕ್ ನಗರದಲ್ಲೂ ಖಾತೆಗಳನ್ನು ಹೊಂದಿದ್ದಾರೆ. ತನಿಖಾಧಿಕಾರಿಗಳು ವಿದೇಶದಲ್ಲಿರುವ ಖಾತೆಗಳ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
