ಅಮೆರಿಕ: ಇರಾನ್ ಯುದ್ಧದ ನಡುವೆಯೇ ಅಣ್ವಸ್ತ್ರ ಸಾಮರ್ಥ್ಯದ ‘ಡೂಮ್ಸ್‌ಡೇ’ ಕ್ಷಿಪಣಿ ಪರೀಕ್ಷೆ

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಆರನೇ ದಿನಕ್ಕೆ ಪ್ರವೇಶಿಸಿದೆ. ಈ ಮಧ್ಯೆ ಅಮೆರಿಕ ಅಣ್ವಸ್ತ್ರ ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿರುವ ಮಿನಿಟ್‌ಮ್ಯಾನ್ III “doomsday” ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ನಡೆಸಿದೆ. ಇದು ಹಿರೋಷಿಮಾದ ಮೇಲೆ ಬೀಳಿಸಿದ ಪರಮಾಣು ಬಾಂಬ್‌ಗಿಂತ 20 ಪಟ್ಟು ಹೆಚ್ಚು ಶಕ್ತಿಶಾಲಿ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ ಎಂದು ವರದಿಯಾಗಿದೆ.
ಮಂಗಳವಾರ ರಾತ್ರಿ, ಅಮೆರಿಕದ ವಾಯುಪಡೆ ಗ್ಲೋಬಲ್ ಸ್ಟೈಕ್ ಕಮಾಂಡ್ ಕ್ಯಾಲಿಫೋರ್ನಿಯಾದ ವಾಂಡೆನ್ ಬರ್ಗ್ ಸ್ಪೇಸ್ ಫೋರ್ಸ್ ಬೇಸ್ ನಿಂದ ಶಸ್ತ್ರರಹಿತ Minuteman III ICBM ಅನ್ನು ಉಡಾವಣೆ ಮಾಡಿದೆ.
ಯುಎಸ್ ಬಾಹ್ಯಾಕಾಶ ಪಡೆ ಪರೀಕ್ಷಾ ವಾಹನ GT-255 ಎಂದು ಗುರುತಿಸಿರುವ ಈ ಕ್ಷಿಪಣಿಯನ್ನು ದೀರ್ಘಕಾಲದ ನಿಯಮಿತ ಮೌಲ್ಯಮಾಪನದ ಭಾಗವಾಗಿ ಉಡಾವಣೆ ಮಾಡಲಾಗಿದೆ. ಪ್ರಸ್ತುತ ನಡೆಯುತ್ತಿರುವ ಸಂಘರ್ಷಕ್ಕೆ ಮತ್ತು ಇದಕ್ಕೆ ಸಂಬಂಧವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆ ಕ್ಷಿಪಣಿ ಸಾವಿರಾರು ಮೈಲುಗಳಷ್ಟು ದೂರ ಯಶಸ್ವಿಯಾಗಿ ಸಂಚರಿಸಿ ಪಶ್ಚಿಮ-ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿರುವ ಮಾರ್ಷಲ್ ದ್ವೀಪಗಳ ಸಮೀಪದ ನಿಗದಿತ ಗುರಿಯನ್ನು ತಲುಪಿದೆ ಎಂದು ವರದಿಯಾಗಿದೆ.
