ಕೇಂದ್ರ ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆತ: ಶಿಷ್ಟಾಚಾರ ಉಲ್ಲಂಘನೆ ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರ ಭಾರಿ ಆಕ್ರೋಶ; ಕೂದಲೆಳೆ ಅಂತರದಲ್ಲಿ ಪಾರಾದ ಸಚಿವ!

ಕೊಪ್ಪಳ: ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮವು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಸಂಸದರ ಹೆಸರನ್ನು ಕೈಬಿಡುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವ ವಿ. ಸೋಮಣ್ಣ ಅವರ ಎದುರೇ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಶಂಕುಸ್ಥಾಪನೆ ಮುಗಿಸಿ ಸಚಿವರು ಹೊರಡುತ್ತಿದ್ದಂತೆ ಉದ್ರಿಕ್ತಗೊಂಡ ಕಾರ್ಯಕರ್ತರು ಸಚಿವರತ್ತ ಕುರ್ಚಿಗಳನ್ನು ತೂರಿ ರಂಪಾಟ ನಡೆಸಿದ್ದಾರೆ. ಈ ವೇಳೆ ಸಚಿವರ ಅಂಗರಕ್ಷಕರು ತಕ್ಷಣ ಕಾರ್ಯಪ್ರವೃತ್ತರಾಗಿ ಸಚಿವರತ್ತ ಬರುತ್ತಿದ್ದ ಕುರ್ಚಿಗಳನ್ನು ತಡೆದು ಹಿಡಿದಿದ್ದರಿಂದ ಸಂಭವನೀಯ ಅನಾಹುತವೊಂದು ತಪ್ಪಿದಂತಾಗಿದೆ. ಕೇವಲ ಐದೇ ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸಿ ಸೋಮಣ್ಣ ಅವರು ಸ್ಥಳದಿಂದ ನಿರ್ಗಮಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸಚಿವರು, ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ, ಸುಮಾರು 27 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಸಂಪೂರ್ಣ ಕೇಂದ್ರ ಸರ್ಕಾರದ ಅನುದಾನದಲ್ಲಿ ನಡೆಯುತ್ತಿದೆ; ಆದರೂ ಉದ್ದೇಶಪೂರ್ವಕವಾಗಿ ಕಾರ್ಯಕರ್ತರ ಮೂಲಕ ಗಲಾಟೆ ಮಾಡಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
