Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಿಎಂ ಸಿದ್ದರಾಮಯ್ಯ ಕರೆದ ಸಂಸದರ ಸಭೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗೈರು: ಕಾರಣ ಸಮೇತ ಪತ್ರ ಬರೆದು ಸ್ಪಷ್ಟನೆ

Spread the love

ನವದೆಹಲಿ: ಸಂಸತ್‌ ಚಳಿಗಾಲದ ಅಧಿವೇಶನ ಹಾಗೂ ಕಾರ್ಯದೊತ್ತಡದ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕರೆದಿರುವ ಸಂಸದರ ಸಭೆಯಲ್ಲಿ ಪಾಲ್ಗೊಳ್ಳುವುದು ಅಸಾಧ್ಯವೆಂದು ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸಭೆಯಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಸಕಾರಣ ಸಮೇತ ಸ್ಪಷ್ಟಪಡಿಸಿರುವ ಸಚಿವರು, ತಾವು ಸಭೆ ನಿಗದಿಪಡಿಸುವ ಮೊದಲೇ ಚರ್ಚಿಸಿ ದಿನಾಂಕ ನಿಗದಿಪಡಿಸಿದ್ದಿದ್ದರೆ ಅನುಕೂಲವಾಗುತ್ತಿತ್ತು ಎಂದೂ ತಿಳಿಸಿದ್ದಾರೆ. 

ಸಂಸದರ ಜತೆ ಚರ್ಚಿಸದೆ ಸಭೆ ನಿಗದಿಪಡಿಸಿದ್ದ ಸಿಎಂ: ರಾಜ್ಯದ ಅಭಿವೃದ್ಧಿ ಮತ್ತು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರದ ಗಮನ ಸೆಳೆಯಲೆಂದು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಡಿ.8ರಂದು ರಾಜ್ಯವನ್ನು ಪ್ರತಿನಿಧಿಸುವ ಸಂಸದರ ಸಭೆ ಕರೆದಿದ್ದರು. ಆದರೆ, ಈ ಬಗ್ಗೆ ಮೊದಲೇ ಸಂಸದರೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸಿರುವುದಿಲ್ಲ ಎಂಬ ಅಂಶ ಇದೀಗ ಸಚಿವ ಪ್ರಹ್ಲಾದ್ ಜೋಶಿ ಅವರ ಪತ್ರದಿಂದ ಬಹಿರಂಗವಾಗಿದೆ.

ಸಚಿವ ಜೋಶಿ ಅವರು ಸಿಎಂಗೆ ಬರೆದ ಪತ್ರದ ಒಕ್ಕಣೆ ಇಂತಿದೆ. ‘ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಾವು ಡಿ.8ಕ್ಕೆ ನವದೆಹಲಿಯಲ್ಲಿ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲಿರುವ ಬಗ್ಗೆ ಬರೆದ ಪತ್ರ ಡಿ.2ರಂದು ಸ್ವೀಕೃತವಾಗಿದೆ. ಆದರೆ, ತಮಗೇ ತಿಳಿದಿರುವಂತೆ ಕೇಂದ್ರದಲ್ಲಿ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅಧಿವೇಶನ ವೇಳೆ ಕಾರ್ಯ ಬಾಹುಳ್ಯ ಸಾಕಷ್ಟಿರುವುದು ತಮಗೆ ಗೊತ್ತಿರುವ ವಿಷಯವೇ. ಹಣಕಾಸು ಇಲಾಖೆ ಮಸೂದೆ ಮಂಡನೆಯಾಗುತ್ತಿವೆ. ಹಾಗಾಗಿ ಸಚಿವರಾದ ನಮಗೆಲ್ಲ ಸಂಸತ್ ಅಧಿವೇಶನ ಹಾಗೂ ಇಲಾಖೆಗಳ ಕಾರ್ಯದೊತ್ತಡವಿದೆ. ಅಲ್ಲದೇ, ಡಿ.8ರಂದೇ ಹೊಸ ಮತ್ತು ನವೀಕೃತ ಇಂಧನ ಇಲಾಖೆ ಸಂಬಂಧ ಪ್ರಧಾನಿ ವಿಶೇಷ ಸಭೆಯಿದೆ. ಹಣಕಾಸು ಸಚಿವಾಲಯದಿಂದ ಸಂಸತ್ತಿನಲ್ಲಿ ಬಿಲ್ ಮಂಡನೆಗೊಳಿಸುವುದು ಪೂರ್ವದಲ್ಲೇ ನಿಗದಿಗೊಂಡಿದೆ. ಅದೇ ದಿನ “ವಂದೇ ಮಾತರಂ” ಗೀತೆಯ 150ನೇ ವರ್ಷಾಚರಣೆ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಡಿ.8ರಂದು ನಿಗದಿಪಡಿಸಿದ ಸಭೆಯಲ್ಲಿ ನಾವುಗಳು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಎಲ್ಲಾ ಕೇಂದ್ರ ಸಚಿವರೂ ಸಿಎಂಗೆ ಮರುಪತ್ರ ಬರೆದು ತಿಳಿಸಿದ್ದಾರೆ.

ಮೊದಲೇ ಚರ್ಚಿಸಿ ಸಭೆ ನಿಗದಿಪಡಿಸಿದ್ದರೆ ಅನುಕೂಲವಿತ್ತು: ಮುಖ್ಯಮಂತ್ರಿಗಳು ಮೊದಲೇ ಚರ್ಚಿಸಿ ದಿನಾಂಕ ನಿಗದಿಪಡಿಸಿದ್ದರೆ ಅನುಕೂಲವಾಗುತ್ತಿತ್ತು ಎಂದಿರುವ ಸಚಿವ ಜೋಶಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರೂ ಸಭೆಗೆ ಪಾಲ್ಗೊಳ್ಳಲು ಸಾಧ್ಯವಾಗದಿರುವ ಬಗ್ಗೆ ತಿಳಿಸಿಯಪಡಿಸಿದ್ದಾರೆ ಎಂದು ಸಿಎಂಗೆ ಪತ್ರ ಮುಖೇನವೇ ಪ್ರತ್ಯುತ್ತರ ನೀಡಿದ್ದಾರೆ.

ಒಮ್ಮೆ ಚರ್ಚಿಸಿ ಮತ್ತೊಂದು ದಿನ ಗೊತ್ತುಪಡಿಸಿ: ರಾಜ್ಯದ ಸಮಗ್ರ ಅಭಿವೃದ್ಧಿ ಜನಕಲ್ಯಾಣದ ವಿಷಯದಲ್ಲಿ ತಾವು ಬದ್ಧವಾಗಿದ್ದೇವೆ ಮತ್ತು ತಮ್ಮೊಂದಿಗೆ ಚರ್ಚಿಸಲು ಉತ್ಸುಕರಾಗಿದ್ದೇವೆ. ದಯಮಾಡಿ ಡಿ.8ರ ಬದಲಾಗಿ ಮತ್ತೊಂದು ದಿನವನ್ನು ಗೊತ್ತುಪಡಿಸಿ. ಆದರೆ, ಇದಕ್ಕೂ ಮುನ್ನ ಒಮ್ಮೆ ರಾಜ್ಯದ ಕೇಂದ್ರ ಸಚಿವರೊಂದಿಗೆ ಒಮ್ಮೆ ಸಮಾಲೋಚಿಸಿ ದಿನಾಂಕ ನಿಗದಿಪಡಿಸಿದಲ್ಲಿ ಅನುಕೂಲವಾಗುತ್ತದೆ ಎಂದು ಸಿಎಂ ಗಮನ ಸೆಳೆದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *