ದಾಖಲೆಯ 8ನೇ ಬಜೆಟ್ ಮಂಡನೆ.. ಸಚಿವೆ ನಿರ್ಮಲಾ ಲೆಕ್ಕದ ಮೇಲೆ ದೇಶದ ಚಿತ್ತ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಎನ್ಡಿಎ ಸರ್ಕಾರ ಇಂದು ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಬರೆಯುತ್ತಿದ್ದಾರೆ.
2025ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕೌಂಟ್ ಡೌನ್ ಶುರುವಾಗಿದ್ದು, ಮೋದಿ ಸರ್ಕಾರ 3.O ಬಜೆಟ್ನಲ್ಲಿ ಜನಸಾಮಾನ್ಯರಿಗೆ ಏನೆಲ್ಲಾ ಸಿಗಬಹುದು ಎಂಬ ನಿರೀಕ್ಷೆ ಹುಟ್ಟಿದೆ. ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಲೆಕ್ಕದ ಮೇಲೆ ಇಡಿ ದೇಶದ ಚಿತ್ತ ನೆಟ್ಟಿದೆ.
ಇಂದು ಬೆಳಗ್ಗೆ 11 ಗಂಟೆ ನಂತರ ಸಂಸತ್ನಲ್ಲಿ ಬಜೆಟ್ ಮಂಡನೆಯಾಗಲಿದ್ದು, ನಿರೀಕ್ಷೆಗಳ ಭಾರ ಹೆಚ್ಚಿದೆ. ಬಜೆಟ್ನಲ್ಲಿ ಸರ್ಕಾರ ಜನಸಾಮಾನ್ಯರಿಗೆ ಏನೆಲ್ಲಾ ಗಿಫ್ಟ್ಗಳನ್ನ ನೀಡಲಿದೆ ಅನ್ನೋ ಕೌತುಕ ಮನೆ ಮಾಡಿದೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಶ್ರೇಯ ಪಡೆಯಲು ಬಯಸಿರುವ ಕೇಂದ್ರ ಸರ್ಕಾರ, ಜನಸ್ನೇಹಿ ಬಜೆಟ್ಗೆ ಒತ್ತು ನೀಡುವ ಸಾಧ್ಯತೆಯಿದೆ.