ಭೂಕಂಪವನ್ನು ಲೆಕ್ಕಿಸದೆ ನಡುಗಿದ ನೆಲದ ಮಧ್ಯೆ ವೈದ್ಯರಿಂದ ಆಪರೇಷನ್

ನಿನ್ನೆ ರಷ್ಯಾದಲ್ಲಿ ಸಾಗರದಾಳದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿತ್ತು. ಈ ಭೂಕಂಪನದ ನಂತರ ರಷ್ಯಾ, ಜಪಾನ್, ಹವಾಯ್ ಮುಂತಾದ ದೇಶಗಳ ಕರಾವಳಿಯಲ್ಲಿ ಸುನಾಮಿ ಘೋಷಣೆ ಮಾಡಲಾಗಿತ್ತು. ಹಾಗೂ ಭಾರಿ ತೀವ್ರತೆಯ ಅಲೆಗಳು ಕರಾವಳಿಯಲ್ಲಿ ಕಂಪನ ಸೃಷ್ಟಿಸಿದ್ದವು.
ಜಪಾನ್ ದೇಶದ ಕರಾವಳಿಯಲ್ಲಿ ಭಾರಿ ಗಾತ್ರದ ತಿಮಿಂಗಿಲಗಳು ಸುನಾಮಿ ಹೊಡೆತಕ್ಕೆ ಸಿಲುಕಿ ತೀರಕ್ಕೆ ಬಂದಿದ್ದವು.

ಭೂಕಂಪನದ ಸಂದರ್ಭದ ಹಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿವೆ. ಅದೇ ರೀತಿ ಭೂಕಂಪನದ ವೇಳೇ ಆಸ್ಪತ್ರೆಯ ಶಸ್ತ್ರಚಿಕತ್ಸೆ ಕೇಂದ್ರದ ವೀಡಿಯೋ ಕೂಡ ವೈರಲ್ ಆಗಿದೆ. ಆಸ್ಪತ್ರೆಯಲ್ಲಿ ನೆಲ ನಡುಗುತ್ತಿದ್ದರೂ. ವೈದ್ಯರು ಸ್ವಲ್ಪವೂ ತಲೆಕೆಡಿಸಿಕೊಳ್ಳದೇ ಆಪರೇಷನ್ ಮುಂದುವರೆಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಿನ್ನೆ ರಷ್ಯಾದ ಕಮ್ಚಟ್ಕ ಪ್ರದೇಶ ಪ್ರಬಲ ಭೂಕಂಪನಕ್ಕೆ ಸಾಕ್ಷಿಯಾಯ್ತು. ಇದರಿಂದ ಫೇಸಿಪಿಕ್ ಸಾಗರದೆಲ್ಲೆಡೆ ಸುಮಾರು 4 ಮೀಟರ್ ಎತ್ತರದಲ್ಲಿ ಅಲೆಗಳು ಅಪ್ಪಳಿಸಿದ್ದವು. ಹಾಗೆಯೇ ಭೂಕಂಪ ಸಂಭವಿಸಿದ ಕಮ್ಚಟ್ಕ ಪ್ರದೇಶದ ಹಲವು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅವುಗಳಲ್ಲಿ ಕಟ್ಟಡಗಳು ಅಲುಗಾಡುತ್ತಿರುವುದು ಕಟ್ಟಡದಲ್ಲಿದ್ದ ವಸ್ತುಗಳು ಕೆಳಗೆ ಬಿದ್ದು ಚದುರಿ ಹೋಗಿರುವುದು ಕಾಣುತ್ತಿದೆ.
ಕಮ್ಚಟ್ಕದ ಆಸ್ಪತ್ರೆಯ ವೀಡಿಯೋ ವೈರಲ್
ಹಾಗೆಯೇ ಕಮ್ಚಟ್ಕದ ಆಸ್ಪತ್ರೆಯೊಂದರ ವೀಡಿಯೋವನ್ನು ರಷ್ಯಾದ ಸರ್ಕಾರಿ ನಿಯಂತ್ರಣದ ಮಾಧ್ಯಮವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದು ಕಮ್ಚಟ್ಕದ ಕ್ಯಾನ್ಸರ್ ಆಸ್ಪತ್ರೆಯಾಗಿದ್ದು, ಆಪರೇಷನ್ ಥಿಯೇಟರ್‌ನ ವೀಡಿಯೋ ಇದಾಗಿದೆ. ವೀಡಿಯೋದಲ್ಲಿ ಡಾಕ್ಟರ್‌ಗಳು ಭೂಮಿ ನಡುಗುತ್ತಿದ್ದರು ಆಪರೇಷನ್ ಮಾಡುವುದರಲ್ಲಿಯೇ ಮಗ್ನರಾಗಿದ್ದಾರೆ. ಸುತ್ತಲೂ ಅಲುಗುತ್ತಿರುವುದರ ಜೊತೆ ಇಡೀ ಕಟ್ಟಡವೇ ಶೇಕ್ ಅಗ್ತಿದ್ದರೂ ವೈದ್ಯರು ಶಾಂತವಾಗಿ ಆಪರೇಷನ್‌ನಲ್ಲಿ ತೊಡಗಿದ್ದಾರೆ.
ರೋಗಿಯನ್ನು ಮಲಗಿಸಿರುವ ಬೆಡ್ ಹಾಗೂ ಆಪರೇಷನ್‌ಗಾಗಿ ಹಾಕಿದ್ದ ಲೈಟ್‌ಗಳು ಪ್ರತಿಯೊಂದು ಜೋರಾಗಿ ಅಲುಗಾಡುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಆದರೂ ಯಶಸ್ವಿಯಾಗಿ ಆಪರೇಷನ್ ಮಾಡಲಾಗಿದ್ದು, ರೋಗಿ ಹುಷಾರಾಗುತ್ತಿದ್ದಾರೆ ಎಂಬ ಮಾಹಿತಿ ಇದೆ.
ಜೀವ ಉಳಿಸಿಕೊಳ್ಳಲು ನೀರಿಗೆ ಹಾರಿದ ಸಮುದ್ರ ಸಿಂಹಗಳು
ಹಾಗೆಯೇ ಭೂಕಂಪನದ ಸಂದರ್ಭದ ಮತ್ತೊಂದು ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಸಮುದ್ರ ಸಿಂಹಗಳು ಭೂಕಂಪನದಿಂದ ಪಾರಾಗಲು ಸಮುದ್ರಕ್ಕೆ ಹಾರುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಬಂಡೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಸಮುದ್ರ ಸಿಂಹಗಳು ಸಾಮೂಹಿಕವಾಗಿ ನೀರಿಗೆ ಹಾರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಸಮುದ್ರ ಪ್ರವಾಸದಲ್ಲಿ ಭಾಗವಹಿಸಿದ್ದವರು ಈ ದೃಶ್ಯವನ್ನು ಸೆರೆಹಿಡಿದಿದ್ದು ವೈರಲ್ ಆಗಿದೆ. ಬುಧವಾರ ಸಂಭವಿಸಿದ 8.8 ತೀವ್ರತೆಯ ಭೂಕಂಪದಿಂದಾಗಿ ಸಮುದ್ರ ಸಿಂಹಗಳು ಬಂಡೆಗಳಿಂದ ಸಮುದ್ರಕ್ಕೆ ಸಾಮೂಹಿಕವಾಗಿ ಹಾರಿ ಕರಾವಳಿಯಿಂದ ದೂರ ಈಜುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಪ್ರವಾಸಿಗರೊಬ್ಬರು ಓಖೋಟ್ಸ್ಕ್ ಸಮುದ್ರದ ಆಂಟಿಫೆರೋವ್ ದ್ವೀಪದ ಬಳಿ ಸೆರೆಹಿಡಿದಿದ್ದಾರೆ.