ಕಡಬ ಪೊಲೀಸ್ ಠಾಣೆ ಎದುರು ಕಾನೂನುಬಾಹಿರ ಪ್ರತಿಭಟನೆ:15 ಮಂದಿ ವಿರುದ್ಧ ಎಫ್‌ಐಆರ್

ಕಡಬ: ಪೂರ್ವಾನುಮತಿ ಪಡೆಯದೆ ಜೂನ್ 1 ರ ರಾತ್ರಿ ಕಡಬ ಪೊಲೀಸ್ ಠಾಣೆಯ ಮುಂದೆ ಕಾನೂನುಬಾಹಿರ ಪ್ರತಿಭಟನೆ ನಡೆಸಿದ 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪ್ರಯತ್ನದಲ್ಲಿ ವಿವಿಧ ಸಂಘಟನೆಗಳ ಪ್ರಮುಖ ಸದಸ್ಯರ ಹಿನ್ನೆಲೆಯನ್ನು ಪರಿಶೀಲಿಸುತ್ತಿರುವ ಪೊಲೀಸರು ತೆಗೆದುಕೊಳ್ಳುತ್ತಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಲಾಗಿದೆ ಎಂದು ವರದಿಯಾಗಿದೆ.ಪ್ರಮೋದ್ ರೈ ನಂದುಗುರಿ, ತಿಲಕ್ ನಂದುಗುರಿ, ಮೋಹನ ಕೆರೆಕೋಡಿ, ಚಂದ್ರಶೇಖರ ನೂಜಿಬಾಳ್ತಿಲ, ಮಹೇಶ್ ಕುಟ್ರುಪ್ಪಾಡಿ, ಡೀಕಯ್ಯ ನೂಜಿಬಾಳ್ತಿಲ, ಸುಜಿತ್ ಕುಟ್ರುಪ್ಪಾಡಿ, ಶರತ್ ನಂದುಗುರಿ, ಶ್ರೇಯತ್, ನಂದುಗುರಿ, ಉಮೇಶ್ ನೂಜಿಬಾಳ್ತಿಲ, ರಾದಾಕೃಷ್ಣ. ಕೆ, ಜಯಂತ್ ಮತ್ತು ಇತರೆ ಮೂವರ ಮೇಲೆ ಎಫ್‌ಐಆರ್ ದಾಖಲಾಗಿದೆ.ಅಧಿಕೃತ ಅನುಮತಿಯಿಲ್ಲದೆ ಕಾನೂನುಬಾಹಿರ ಸಭೆ ಮತ್ತು ಪ್ರತಿಭಟನೆಯನ್ನು ಉಲ್ಲೇಖಿಸಿ ಕಡಬ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023 ರ ಐಪಿಸಿ ಸೆಕ್ಷನ್ 189 (2) ಮತ್ತು 190 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
