ಉಳ್ಳಾಲ: ಎಟಿಎಂ ಕಳ್ಳತನ ಯತ್ನ – ಸೆಕ್ಯುರಿಟಿ ಅಲರ್ಟ್ನಿಂದ ಕಳ್ಳನ ಬಂಧನ

ಉಳ್ಳಾಲ : ಎಟಿಎಂಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿರುವ ವೇಳೆ ಎಟಿಎಂ ನ ಸೆಕ್ಯುರಿಟಿ ಅಲರ್ಟ್ ನಿಂದಾಗ ಕಳ್ಳ ಸಿಕ್ಕಿಬಿದ್ದ ಘಟನೆ ಉಳ್ಳಾಲ ಕೋಟೆಕಾರು ಬೀರಿಯ ಎಟಿಎಂನಲ್ಲಿ ನಡೆದಿದೆ.
ಬಂಧಿತ ಕಳ್ಳನನ್ನು ಕೊಪ್ಪಳ ಕುಷ್ಟಗಿ ನಿವಾಸಿ ನಾಗಪ್ಪ ಕಿರಾಲಟ್ಟಿ (41) ಎಂದು ಗುರುತಿಸಲಾಗಿದೆ.

ಆರೋಪಿಯು ಗುರುವಾರ ನಸುಕಿನ 2.42ರ ಸುಮಾರಿಗೆ ಬೀರಿಯ ಎಸ್ ಬಿಐ ಗೆ ಸೇರಿದ ಎಟಿಎಂ ಒಳಗೆ ನುಗ್ಗಿ ಕ್ಯಾಶ್ ಬಾಕ್ಸ್ ಅನ್ನು ತನ್ನಲ್ಲಿದ್ದ ಆಯುಧಗಳಿಂದ ಒಡೆದು ಹಾನಿಗೊಳಿಸಿದ್ದನು. ಈ ಸಂದರ್ಭ ದೆಹಲಿಯಲ್ಲಿರುವ ಎಟಿಎಂ ಉಸ್ತುವಾರಿ ನೋಡುವ ಸಂಸ್ಥೆಯ ಸಿಸ್ಟಮ್ ಗೆ ಸಂದೇಶ ರವಾನೆಯಾಗಿತ್ತು. ತಕ್ಷಣ ಅಲ್ಲಿನ ಸಿಬ್ಬಂದಿ ರಂಜಿತ್ ಎಂಬವರು ಸಿಸಿಟಿವಿ ಪರಿಶೀಲಿಸಿದ್ದು, ಎಟಿಎಮ್ ಒಳಗಡೆ ಆಗಂತುಕನೋರ್ವ ಕಳವಿಗೆ ಕೃತ್ಯ ಎಸಗುತ್ತಿರುವುದನ್ನು ಖಚಿತಪಡಿಸಿದ್ದಾರೆ.
ಈ ಬಗ್ಗೆ ರಂಜಿತ್ ಅವರು ಕೂಡಲೇ ಬೀರಿಯ ಎಟಿಎಮ್ ಉಸ್ತುವಾರಿ ನೋಡುತ್ತಿರುವ ದೀಪಕ್ ಅಮೀನ್ ಎಂಬವಿಗೆ ಮಾಹಿತಿ ನೀಡಿದ್ದು, ದೀಪಕ್ ಅವರು ಕೂಡಲೇ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ದಾಳಿ ನಡೆಸಿ ಬೀರಿ ಎಟಿಎಮ್ ಒಳಗಡೆಯಿದ್ದ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
