14 ಚಕ್ರಗಳ ಟ್ರಕ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವು

ಉಡುಪಿ : 14 ಚಕ್ರಗಳ ಬೃಹತ್ ಟ್ರಕ್ ಬೈಕ್ ಸವಾರನ ಮೇಲೆ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ ಭೀಕರ ಅಪಘಾತ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿ ಸೋಮವಾರ ಸಂಭವಿಸಿದೆ.

ಮೃತರನ್ನು ದೆಂದೂರುಕಟ್ಟೆಯ ಪ್ರದೀಪ (38) ಎಂದು ಗುರುತಿಸಲಾಗಿದೆ. ಅಂಬಲಪಾಡಿ ಸುರಭಿ ಅಟೋಮೊಬೈಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಬೈಕ್ ಸವಾರನ ತಲೆ ಛಿದ್ರಗೊಂಡಿದೆ. ಅಪಘಾತ ಸ್ಥಳದಿಂದ ಸುಮಾರು 100 ಮೀಟರ್ ದೂರ ಅವರನ್ನು ಟ್ರಕ್ ಎಳೆದೊಯ್ದಿದೆ. ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ನೆರವಾದರು.
NHAI ಅಧಿಕಾರಿಗಳು, ಕಾರ್ಲಾ ಕನ್‌ಸ್ಟ್ರಕ್ಷನ್, ಅಂಬಲಪಾಡಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರ ವಿರುದ್ಧ ಮತ್ತು ಕಂಟೇನರ್ ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆಗಾಗಿ ಪ್ರಕರಣ ದಾಖಲಿಸಲಾಗಿದೆ.