ಉಡುಪಿ ನೀಟ್ ನಕಲಿ ಅಂಕಪಟ್ಟಿ ಪ್ರಕರಣ: ಪ್ರಮುಖ ಆರೋಪಿ ಪತ್ತೆಯಾಗಿಲ್ಲ, ದೂರುದಾರರಿಗೆ ನೋಟಿಸ್!

ಉಡುಪಿ: ನಗರದಲ್ಲಿ ನಡೆದ ನೀಟ್ ನಕಲಿ ಅಂಕಪಟ್ಟಿ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದಲ್ಲಿ ಪೊಲೀಸರು ಪ್ರಮುಖ ಆರೋಪಿಯ ಪತ್ತೆಗೆ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಆದರೆ ಆತ ಪತ್ತೆಯಾಗದ ಕಾರಣ ವಾಪಸ್ ಆಗಿದ್ದಾರೆ.

ಸರಕಾರಿ ಅಧಿಕಾರಿ ರೋಶನ್ ಶೆಟ್ಟಿ ಅವರ ಪುತ್ರ ನೀಟ್ ಬರೆದಿದ್ದು, ಇದಕ್ಕೆ ತಯಾರಿ ನಡೆಸುವಾಗ ಎಡಿಟಿಂಗ್ ಮಾಸ್ಟರ್ ಯೂ ಟ್ಯೂಬ್ ಚಾನೆಲ್ನಲ್ಲಿ ಜೆಇಇ, ನೀಟ್ ಹಾಗೂ ಸಿಬಿಎಸ್ಇ ಪರೀಕ್ಷೆಯ ಅಂಕಪಟ್ಟಿಗಳನ್ನು ನಕಲಿ ಮಾಡುವುದು ಹೇಗೆ ಎಂದು ಇದ್ದು, ಎರಡು ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿತ್ತು. ಅವನು ವಾಟ್ಸ್ ಆಯಪ್ ಮೂಲಕ ಈ ಸಂಖ್ಯೆಗಳನ್ನು ಸಂಪರ್ಕಿಸಿದ್ದ. ಆರೋಪಿ ವಿಶು ಕುಮಾರ್ ಮತ್ತಿತರರು ನಕಲಿ ನೀಟ್ ಅಂಕಪಟ್ಟಿ ಹಾಗೂ ಒಎಂಆರ್ ಶೀಟ್ಗಳನ್ನು ನೀಡುವು ದಾಗಿ ತಿಳಿಸಿ ಹಣ ಪಡೆದು ವಾಟ್ಸ್ಆಯಪ್ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಹಾಗಾಗಿ ಆರೋಪಿಗಳು ನನ್ನ ಮಗನಿಗೆ ವಂಚಿಸಿ, ಅಕ್ರಮವಾಗಿ ಹಣ ವರ್ಗಾಯಿಸಿಕೊಂಡಿದ್ದು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದರು.
ಪ್ರಸ್ತುತ ಪ್ರಮುಖ ಆರೋಪಿ ವಿಶು ಯಾನೆ ವಿಷ್ಣು ಕುಮಾರ್ ಪತ್ತೆಯಾಗದ ಕಾರಣ ಸರಕಾರಿ ಅಧಿಕಾರಿ ರೋಶನ್ ಶೆಟ್ಟಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಅವರು ಇದುವರೆಗೆ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ. ತನಿಖೆ ಪ್ರಗತಿಯಲ್ಲಿದೆ.
