ಉಡುಪಿಯಲ್ಲಿ ಗೋಕಳ್ಳರ ಬೇಟೆ: 49 ಪ್ರಕರಣಗಳಲ್ಲಿ ಭಾಗಿಯಾದ ಇಬ್ಬರು ಆರೋಪಿಗಳು ಅರೆಸ್ಟ್

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಗೋಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು ಗೋಕಳ್ಳರ ವಿರುದ್ದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಬಿದ್ಕಲ್ ಕಟ್ಟೆ ಪೇಟೆಯ ಬಳಿ ನಡೆದ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಅಮೆಮ್ಮಾರ್ ಮಸೀದಿ ಬಳಿಯ ನಿವಾಸಿ ಇಮ್ರಾನ್ ಯಾನೆ ಕುಟ್ಟು(31)ಮತ್ತು ಮಂಗಳೂರು ತಾಲೂಕಿನ ಗಂಜಿಮಠ, ಮುಂದುಪುರ ಗ್ರಾಮದ ಮುಂಡೇವು ನಿವಾಸಿ ಇರ್ಷಾದ್(30) ಬಂಧಿತ ಆರೋಪಿಗಳು. ಕುಂದಾಪುರದ ಹುಣಸೇಮಕ್ಕಿ ಕಡೆಯಿಂದ ಬಂದ ವಾಹನದಲ್ಲಿ ಮೂವರು ಗೋಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೀಡಾಡಿ ದನವನ್ನು ಕದ್ದುಕೊಂಡು ಹೋಗಿದ್ದರು. ಬಿದ್ಕಲ್ ಕಟ್ಟೆ ಪೇಟೆಯ ಬಳಿ ವಾಹನದಿಂದ ಕೆಳಗಿಳಿದು ಮಲಗಿದ್ದ ಹಸುವನ್ನು ಹಿಂಸಾತ್ಮಕವಾಗಿ ಎಳೆದೊಯ್ಯುತ್ತಿದ್ದರು. ಬಳಿಕ ಈ ವಾಹನ ಶಿರಿಯಾರ ಕಡೆಗೆ ಹೋಗಿತ್ತು.
ಮಾಹಿತಿ ತಿಳಿದು ತಕ್ಷಣವೇ ಕಾರ್ಯಪ್ರವೃತ್ತರಾದ ಬ್ರಹ್ಮಾವರ ಪೊಲೀಸರು, ಕೋಟ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆಗಿಳಿದು, ಇಮ್ರಾನ್ ಹಾಗೂ ಇರ್ಷಾದ್ ಎಂಬಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಗೋ ಕಳ್ಳತನಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಇಮ್ರಾನ್ ವಿರುದ್ಧ ಒಟ್ಟು 35 ಗೋ ಕಳ್ಳತನ ಪ್ರಕರಣಗಳಿವೆ. ಇನ್ನೋರ್ವ ಆರೋಪಿ ಇರ್ಶಾದ್ ವಿರುದ್ಧ ಒಟ್ಟು 14 ಪ್ರಕರಣಗಳು ಈವರೆಗೆ ದಾಖಲಾಗಿವೆ. ಪೊಲೀಸರ ಈ ತಕ್ಷಣದ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
