ಉಬರ್ ಚಾಲಕನಿಗೆ ಎದೆನೋವು: ಕ್ಯಾಬ್ ಚಲಾಯಿಸುವ ಮೂಲಕ ಮಾನವೀಯತೆ ಮೆರೆದ ಮಹಿಳೆ

ಪ್ರಯಾಣದ ಸಮಯದಲ್ಲಿ ಉಬರ್ ಚಾಲಕನಿಗೆ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಸ್ವತಃ ಕಾರು ಚಲಾಯಿಸಿ ಮಾನವೀಯತೆ ಮೆರೆದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಕಾರು ಚಲಾಯಿಸಿದ ಮಹಿಳೆ, ತನ್ನ ಮಗಳು, ತಾಯಿ ಮತ್ತು ಅಜ್ಜಿಯೊಂದಿಗೆ ಗುರುಗ್ರಾಮ್‌ನಿಂದ ದೆಹಲಿಗೆ ಉಬರ್ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಕಾರು ಚಾಲಕನಿಗೆ ಅನಾರೋಗ್ಯ ಕಾಡಿದೆ. ಚಾಲಕ ಎದೆ ನೋವಿನಿಂದ ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ಮಹಿಳೆ, ಸ್ವತಃ ಕಾರು ಚಾಲನೆ ಮಾಡುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದರು.
ಮಹಿಳೆಯ ಹೆಸರು ಅಮಾಯ್ತಾ. ಇವರು ಮೇಕಪ್ ಆರ್ಟಿಸ್ಟ್ ಆಗಿದ್ದು, ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಅಮಾಯ್ತಾ ಅವರು ಎಲ್ಲಾ ಮಹಿಳೆಯರು ಡ್ರೈವಿಂಗ್ ಕಲಿಯಬೇಕೆಂದು ಸಲಹೆ ನೀಡಿದ್ದಾರೆ. ನನ್ನ ಡ್ರೈವಿಂಗ್ ಸ್ಕಿಲ್ ಹೇಗಿದೆ ಅಂತ ಪ್ರಯಾಣದ ಸಮಯದಲ್ಲಿ ನಿರಾಳವಾಗಿದ್ದ ಉಬರ್ ಚಾಲಕನನ್ನು ಅಮಾಯ್ತಾ ತಮಾಷೆಯಾಗಿ ಕೇಳುತ್ತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಾಮೆಂಟ್ ವಿಭಾಗದಲ್ಲಿ ಅನೇಕ ನೆಟ್ಟಿಗರು ಅಮಾಯ್ತಾರನ್ನು ಕೊಂಡಾಡುತ್ತಿದ್ದಾರೆ.
ಇನ್ನೂ ಮಾನವೀಯತೆ ಮರೆಯಾಗಿಲ್ಲ ಅನ್ನುವುದಕ್ಕೆ ಈ ಘಟನೆ ಸಾಕ್ಷಿ. ಮಾನವೀಯತೆಯೇ ಮೊದಲು ಮತ್ತು ನಿಮ್ಮ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಅನೇಕ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.