ಅಮೆರಿಕದ ಸುಂಕ ಭೀತಿ: ಭಾರತದ ಷೇರು ಮಾರುಕಟ್ಟೆಗೆ ತೀವ್ರ ಆಘಾತ!

ಭಾರತದ ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಭಾರತ ಹಾಗೂ ಅಮೆರಿಕದ ವ್ಯಾಪಾರ ಪಾಲುದಾರರ ಮೇಲೆ ಏಪ್ರಿಲ್ 2 ರಿಂದ ನಿಗದಿತ ಸುಂಕವನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿರುವುದೇ ಮಾರುಕಟ್ಟೆಯ ಕುಸಿತಕ್ಕೆ ಕಾರಣ ಎನ್ನಲಾಗಿದೆ.
ನಾಳೆಯಿಂದ ಡೊನಾಲ್ಡ್ ಟ್ರಂಪ್ ಪರಸ್ಪರ ಸುಂಕ ವಿಧಿಸುತ್ತೇನೆ ಎಂದು ಹೇಳಿದ್ದರಿಂದ ಮಾರುಕಟ್ಟೆಯಲ್ಲಿ ಭಾರಿ ಕುಸಿತವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಅಮೆರಿಕದ ಸುಂಕಗಳಲ್ಲಿ ಏರಿಕೆ ಕಂಡುಬರುತ್ತದೆ ಎನ್ನುತ್ತಿದ್ದಂತೆ ದೇಶೀಯ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದಿದೆ. ರಂಜಾನ್ ರಜೆಯ ಕಾರಣದಿಂದಾಗಿ ಈ ವಾರದ ಮೊದಲ ವಹಿವಾಟು ಮಂಗಳವಾರದಂದು ಸೆನ್ಸೆಕ್ಸ್(Sensex) ಕುಸಿತಗೊಂಡಿದೆ. ಜೊತೆಗೆ ನಿಫ್ಟಿ ಕೂಡ ಕುಸಿದಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರಸ್ಪರ ಸುಂಕಗಳ ಕುರಿತಾದ ಐಟಿ ಷೇರುಗಳು ಕುಸಿದು ಬಿದ್ದಿವೆ. ಇದರಿಂದಾಗಿ ಬಿಎಸ್‌ಇಯ 30 ಷೇರು ಸೂಚ್ಯಂಕ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 639.13 ಪಾಯಿಂಟ್‌ಗಳ ಕುಸಿತ ಕಂಡಿದ್ದು, 76,775.79 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 180.25 ಅಂಕಗಳ ಕುಸಿತ ಕಂಡು 23,339.10 ಕ್ಕೆ ತಲುಪಿದೆ.
ಸೆನ್ಸೆಕ್ಸ್ 639.13 ಪಾಯಿಂಟ್‌ಗಳ ಕುಸಿತದೊಂದಿಗೆ 76,775.79 ಕ್ಕೆ ತಲುಪಿದ್ದು, ನಿಫ್ಟಿ ಸಹ 180.25 ಪಾಯಿಂಟ್‌ಗಳ ಕುಸಿತ ಕಂಡು 23,339.10 ಪಾಯಿಂಟ್‌ಗಳಿಗೆ ಬಂದು ನಿಂತಿದೆ. ನಂತರ ಬೆಳಗ್ಗೆ 11.24 ಕ್ಕೆ, ಸೆನ್ಸೆಕ್ಸ್ 1,062.72 (1.37%) ಅಂಕಗಳು ಕುಸಿದು 76,370.26 ಮಟ್ಟವನ್ನು ತಲುಪಿತು. ಮತ್ತೊಂದೆಡೆ, ನಿಫ್ಟಿ 277.15 (1.18%) ಪಾಯಿಂಟ್‌ಗಳ ಕುಸಿತ ಕಂಡು 23,242.20 ಕ್ಕೆ ಬಂದು ನಿಂತಿದೆ.
ಚೀನಾ, ಕೆನಡಾ ಮತ್ತು ಮೆಕ್ಸಿಕೊದಂತಹ ಇತರ ದೇಶಗಳಿಗೆ ಹೋಲಿಸಿದರೆ, ಭಾರತದ ಮೇಲಿನ ಪರಸ್ಪರ ಸುಂಕಗಳ ಹೊರೆಯನ್ನು ಕಡಿಮೆ ಮಾಡಲು ಎರಡೂ ರಾಷ್ಟ್ರಗಳು ಅನುಕೂಲಕರ ವ್ಯಾಪಾರ ಒಪ್ಪಂದದ ಮೇಲೆ ಕೆಲಸ ಮಾಡುತ್ತಿವೆ ಎಂದು ಹಿಂದಿನ ವರದಿಗಳು ಹೇಳಿವೆ. ಆದಾಗ್ಯೂ ಈ ಸುಂಕಗಳು ಏಪ್ರಿಲ್ 2 ರಿಂದ ಹಲವಾರು ಭಾರತೀಯ ಷೇರುಗಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎನ್ನಲಾಗ್ತಾ ಇದೆ.
ಹೂಡಿಕೆ ತಜ್ಞ ಹೇಳಿದ್ದೇನು?
ಹೂಡಿಕೆದಾರರು ಮತ್ತಷ್ಟು ಕುಸಿತಕ್ಕೆ ಸಿದ್ಧರಾಗಬೇಕೇ ಅಥವಾ ಬೇಡವೇ ಎಂಬುದರ ಕುರಿತು, ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ಡಾ.ವಿ.ಕೆ ವಿಜಯಕುಮಾರ್ ಮಾತನಾಡಿದ್ದು, ಇದು ಪ್ರಮುಖವಾಗಿ ಟ್ರಂಪ್ ಸುಂಕಗಳಲ್ಲಿ ಏನು ಘೋಷಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸುಂಕಗಳು ಔಷಧ ಮತ್ತು ಐಟಿಯಂತಹ ವಲಯಗಳ ಮೇಲೆ ಏರಿಳಿತಗೊಳ್ಳಬಹುದು, ಹಾಗಾಗಿ ಹೂಡಿಕೆದಾರರು ಸ್ವಲ್ಪ ಸಮಯ ಕಾದು ನೋಡಿದ ನಂತರ ಹೂಡಿಕೆ ಮಾಡಬೇಕು ಎಂದಿದ್ದಾರೆ.