Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಮೆರಿಕದ ರೆಮಿಟೆನ್ಸ್ ತೆರಿಗೆ ಯೋಜನೆ: ಭಾರತಕ್ಕೆ ಆರ್ಥಿಕ ಹೊಡೆತದ ಎಚ್ಚರಿಕೆ, ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಟ

Spread the love

ನವದೆಹಲಿ: ಭಾರತದ ವಿರುದ್ಧ ಪ್ರತಿಸುಂಕ ಹೇರಿ ನಿದ್ದೆಗೆಡಿಸಿದ್ದ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಈಗ ಮತ್ತೊಂದು ದೊಡ್ಡ ಕ್ರಮಕ್ಕೆ ಮುಂದಾಗಿದೆ. ವರದಿಗಳ ಪ್ರಕಾರ, ಅಮೆರಿಕ ಸರ್ಕಾರ ರೆಮಿಟೆನ್ಸ್ ಟ್ಯಾಕ್ಸ್ ಹೇರಿಕೆ ಮಾಡಲು ಯೋಜಿಸಿದೆಯಂತೆ. ವಲಸೆಗಳಿಗೆ ಕಡಿವಾಣ ಹಾಕುವ ಕ್ರಮಗಳ ಜೊತೆಗೆ ಈಗ ರೆಮಿಟೆನ್ಸ್​​ಗೆ ತೆರಿಗೆಯನ್ನೂ ಹಾಕಿದರೆ ಭಾರತಕ್ಕೆ ಡಬಲ್ ಹೊಡೆತ ಬೀಳುವ ಸಾಧ್ಯತೆ ಇದೆ. ಅಮೆರಿಕಕ್ಕೆ ಹೋಗಿ ಕೆಲಸ ಮಾಡುತ್ತಾ ಅಲ್ಲಿಂದ ಭಾರತಕ್ಕೆ ಹಣ ಕಳುಹಿಸುತ್ತಿರುವ ಭಾರತೀಯರ ಸಂಖ್ಯೆ ಬಹಳ ಇದೆ. ಈ ರೀತಿ ರೆಮಿಟೆನ್ಸ್​​ನಿಂದ ಭಾರತಕ್ಕೆ ಹೇರಳ ಆದಾಯ ಸಿಗುತ್ತದೆ. ಈ ಆದಾಯಕ್ಕೆ ಟ್ರಂಪ್ ಕಲ್ಲೆಸೆಯಲು ಹೊರಟಿದ್ದಾರೆ. ಪಾಕಿಸ್ತಾನದಂತಹ ದೇಶಗಳಿಗೆ ಇನ್ನೂ ದೊಡ್ಡ ಹೊಡೆತ ಬೀಳುವ ನಿರೀಕ್ಷೆ ಇದೆ.

ರೆಮಿಟೆನ್ಸ್ ಎಂದರೇನು? ಟ್ರಂಪ್ ಏನು ಕ್ರಮ ಕೈಗೊಳ್ಳುತ್ತಾರೆ?

ರೆಮಿಟೆನ್ಸ್ ಎಂಬುದು ಒಂದು ವಿಧದ ಹಣ ವರ್ಗಾವಣೆ. ಸಾಮಾನ್ಯವಾಗಿ ಒಂದು ದೇಶದ ಜನರು ಬೇರೆ ದೇಶಕ್ಕೆ ಕೆಲಸಕ್ಕೆ ಹೋಗಿ ತಮ್ಮ ಸಂಪಾದನೆಯ ಹಣವನ್ನು ತವರು ನಾಡಿಗೆ ಕಳುಹಿಸಿಕೊಡುವುದಕ್ಕೆ ರೆಮಿಟೆನ್ಸ್ ಎನ್ನುವುದು. ಈಗ ಈ ರೆಮಿಟೆನ್ಸ್ ಹಣಕ್ಕೆ ಟ್ರಂಪ್ ಸರ್ಕಾರ ಶೇ. 5ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ ಮಾಡಿದೆ. ಇದು ಭಾರತ ಮೊದಲಾದ ದೇಶಗಳ ಆದಾಯಕ್ಕೆ ಕುತ್ತು ತರುವ ಆಲೋಚನೆ.

ರೆಮಿಟೆನ್ಸ್​​ನಿಂದ ಭಾರತಕ್ಕೆ ಎಷ್ಟು ಆದಾಯ ಇದೆ…?

ವಿಶ್ವಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಭಾರತೀಯ ಸಮುದಾಯದವರು ಹರಡಿದ್ದಾರೆ. ಅಮೆರಿಕ, ಗಲ್ಫ್ ಭಾಗಗಳಲ್ಲಿ ಅತಿಹೆಚ್ಚು ಭಾರತೀಯರಿದ್ದಾರೆ. ಬ್ರಿಟನ್, ಆಸ್ಟ್ರೇಲಿಯಾ ಇತ್ಯಾದಿ ಕಡೆಯೂ ಸಾಕಷ್ಟು ಭಾರತೀಯರಿದ್ದಾರೆ. ಇಲ್ಲಿ ಕೆಲಸಕ್ಕೆ ಹೋಗಿ ತಾತ್ಕಾಲಿಕವಾಗಿ ನೆಲಸುವವರೆಲ್ಲರೂ ತಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನು ಭಾರತದಲ್ಲಿರುವ ತಮ್ಮ ಕುಟುಂಬಕ್ಕೆ ತಪ್ಪದೇ ಕಳುಹಿಸಿಕೊಡುತ್ತಾರೆ. ಬೇರೆ ದೇಶಗಳಲ್ಲಿ ಪೌರತ್ವ ಪಡೆದು ನೆಲಸಿರುವ ಅನಿವಾಸಿ ಭಾರತೀಯರೂ ಕೂಡ ತವರಿಗೆ ಹಣ ಕಳುಹಿಸಿಕೊಡಬಹುದು. ಬ್ಲೂಮ್​ಬರ್ಗ್ ವರದಿ ಪ್ರಕಾರ, ಈ ರೀತಿಯಾಗಿ ಭಾರತಕ್ಕೆ ಒಂದು ವರ್ಷದಲ್ಲಿ 120 ಬಿಲಿಯನ್ ಡಾಲರ್​​ನಷ್ಟು ಮೊತ್ತದ ಹಣ ವರ್ಗಾವಣೆ ಆಗುತ್ತದಂತೆ. ಆರ್​​ಬಿಐ ನಡೆಸಿದ ಸಮೀಕ್ಷೆಯಲ್ಲಿ 2023-24ರಲ್ಲಿ ಭಾರತಕ್ಕೆ ರೆಮಿಟೆನ್ಸ್ ರೂಪದಲ್ಲಿ ಬಂದ ಹಣ 118.7 ಬಿಲಿಯನ್ ಡಾಲರ್.

ಪ್ರಪಂಚದಲ್ಲಿ ಯಾವ ದೇಶವೂ ಕೂಡ ಭಾರತದಷ್ಟು ರೆಮಿಟೆನ್ಸ್ ಆದಾಯ ಗಳಿಸುವುದಿಲ್ಲ ಎನ್ನಲಾಗುತ್ತಿದೆ. ಈ 120 ಬಿಲಿಯನ್ ಡಾಲರ್ ಹಣವು ಭಾರತ ಸರ್ಕಾರವು ಇನ್​​ಫ್ರಾಸ್ಟ್ರಕ್ಚರ್ ಯೋಜನೆಗಳಿಗೆ ಒಂದು ವರ್ಷದಲ್ಲಿ ಮಾಡುವ ವೆಚ್ಚಕ್ಕೆ ಸಮವಾಗಿದೆ ಎಂಬುದು ಗಮನಾರ್ಹ.

ಈ 120 ಬಿಲಿಯನ್ ಡಾಲರ್ ರೆಮಿಟೆನ್ಸ್ ಆದಾಯದಲ್ಲಿ ಅಮೆರಿಕದ ಪಾಲು ಶೇ. 28ರಷ್ಟಿದೆ. ಅಮೆರಿಕದಲ್ಲಿರುವ ಭಾರತೀಯರು ತಮ್ಮ ತವರಿಗೆ ಕಳುಹಿಸುವ ಹಣ ಒಂದು ವರ್ಷದಲ್ಲಿ ಬರೋಬ್ಬರಿ 32 ಬಿಲಿಯನ್ ಡಾಲರ್.

2023-24ರಲ್ಲಿ ಭಾರತದ ರೆಮಿಟೆನ್ಸ್ ಆದಾಯಕ್ಕೆ ಯಾವ್ಯಾವ ದೇಶಗಳ ಕೊಡುಗೆ ಎಷ್ಟು?

2023-24ರಲ್ಲಿ ಭಾರತಕ್ಕೆ ಬಂದ ಒಟ್ಟಾರೆ ರೆಮಿಟೆನ್ಸ್: 118.7 ಬಿಲಿಯನ್ ಡಾಲರ್

  • ಅಮೆರಿಕ: ಶೇ. 27.7
  • ಯುಎಇ: ಶೇ. 19.2
  • ಬ್ರಿಟನ್: ಶೇ. 10.8
  • ಸೌದಿ ಅರೇಬಿಯಾ: ಶೇ. 6.7
  • ಸಿಂಗಾಪುರ್: ಶೇ. 6.6
  • ಕುವೇತ್: ಶೇ. 3.9
  • ಕತಾರ್: ಶೇ. 4.1
  • ಕೆನಡಾ: ಶೇ. 3.8
  • ಓಮನ್: ಶೇ. 2.5
  • ಆಸ್ಟ್ರೇಲಿಯಾ: ಶೇ. 2.3

ಇಲ್ಲಿ ಕೊಲ್ಲಿ ಮತ್ತು ಅರಬ್ ನಾಡಿನಿಂದ ಭಾರತಕ್ಕೆ ಒಟ್ಟಾರೆ ಶೇ. 38ರಷ್ಟು ರೆಮಿಟೆನ್ಸ್ ಹರಿದುಬರುತ್ತದೆ. ಕಳೆದ ಏಳೆಂಟು ವರ್ಷಗಳ ಟ್ರೆಂಡ್ ಗಮನಿಸಿದರೆ ಗಲ್ಫ್ ದೇಶಗಳಿಂದ ಭಾರತಕ್ಕೆ ಬರುತ್ತಿರುವ ರೆಮಿಟೆನ್ಸ್ ಕಡಿಮೆ ಆಗುತ್ತಿದೆ. ಅಮೆರಿಕ, ಬ್ರಿಟನ್, ಸಿಂಗಾಪುರ ಮೊದಲಾದ ದೇಶಗಳಿಂದ ರೆಮಿಟೆನ್ಸ್ ಹೆಚ್ಚಾಗಿದೆ.

ಟ್ರಂಪ್ ಕ್ರಮದಿಂದ ರೆಮಿಟೆನ್ಸ್ ಮೇಲೆ ಏನು ಪರಿಣಾಮ?

ಡೊನಾಲ್ಡ್ ಟ್ರಂಪ್ ಅವರು ವಲಸಿಗರನ್ನು ನಿರ್ಬಂಧಿಸುತ್ತಿರುವುದು ಒಂದೆಡೆಯಾದರೆ, ಈಗ ವಲಸಿಗರು ತಮ್ಮ ದೇಶಗಳಿಗೆ ಕಳುಹಿಸಿಕೊಡುವ ಹಣಕ್ಕೂ ನಿರ್ಬಂಧ ಹಾಕುತ್ತಿದ್ದಾರೆ. ಅಮೆರಿಕಕ್ಕೆ ಹೋಗುವ ಭಾರತೀಯರ ಸಂಖ್ಯೆ ಇಳಿಮುಖವಾಗುತ್ತದೆ. ಇದರಿಂದ ರೆಮಿಟೆನ್ಸ್ ಆದಾಯ ಕಡಿಮೆ ಆಗುತ್ತದೆ. ಈಗ ರೆಮಿಟೆನ್ಸ್ ಹಣಕ್ಕೆ ಶೇ. 5ರಷ್ಟು ಟ್ಯಾಕ್ಸ್ ಹಾಕಿದರೆ, ಹಣ ಕಳುಹಿಸುವುದು ಕಡಿಮೆ ಆಗಬಹುದು.

ಪಾಕಿಸ್ತಾನದಂತಹ ದೇಶಗಳಿಗೆ ಇನ್ನೂ ಹೆಚ್ಚು ಸಂಕಟ

ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯಲ್ಲಿರುವ ಪಾಕಿಸ್ತಾನಕ್ಕೆ ಇರುವ ಪ್ರಮುಖ ಆದಾಯಗಳಲ್ಲಿ ರೆಮಿಟೆನ್ಸ್ ಒಂದು. ಪಾಕಿಸ್ತಾನಕ್ಕೆ ಬರುವ ರೆಮಿಟೆನ್ಸ್, ಅದರ ಜಿಡಿಪಿಯ ಶೇ. 10 ಭಾಗದಷ್ಟಾಗುತ್ತದೆ. ಮೊದಲೇ ಸಾಲಗಳ ಶೂಲಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ ಹೊಸ ಸಂಕಷ್ಟ ಎದುರಾಗಬಹುದು.


Spread the love
Share:

administrator

Leave a Reply

Your email address will not be published. Required fields are marked *