ಭಾರತದ “ಪ್ರತಿ ಸುಂಕ” ಹೇಳಿಕೆಗೆ ಅಮೆರಿಕ ಆಕ್ಷೇಪ: ಉಭಯ ದೇಶಗಳ ನಡುವೆ ವ್ಯಾಪಾರ ಸಮರ!

ನವದೆಹಲಿ: ವಿಶ್ವ ವ್ಯಾಪಾರ ಒಪ್ಪಂದದಡಿ ವಾಹನಗಳು ಮತ್ತು ವಾಹನ ಬಿಡಿಭಾಗಗಳ ಮೇಲೆ ಮುಂಜಾಗ್ರತಾ ಕ್ರಮವಾಗಿ ತೆರಿಗೆ ವಿಧಿಸಲಾಗುತ್ತಿದೆ ಎಂಬ ಭಾರತದ ಹೇಳಿಕೆಯನ್ನು ಅಮೆರಿಕ ಖಂಡಿಸಿದ್ದು, ಈ ಸುಂಕವು ರಾಷ್ಟ್ರೀಯ ಭದ್ರತೆ ಸಂಬಂಧಿಸಿದ್ದು ಎಂದು ಅಮೆರಿಕ ಹೇಳಿದೆ.

‘ದೇಶೀಯ ಕೈಗಾರಿಕೆಗಳಿಗೆ ಆಗುವ ಹಾನಿಯನ್ನು ಗಮದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ ಅಮೆರಿಕದಿಂದ ಆಮದಾಗುವ ವಾಹನಗಳು ಮತ್ತು ವಾಹನ ಬಿಡಿಭಾಗಗಳ ಮೇಲೆ ಅಮೆರಿಕ ಸುಂಕಕ್ಕೆ ಪ್ರತಿ ಸುಂಕವನ್ನು (ಶೇ 25) ವಿಧಿಸುವ ಹಕ್ಕು ನಮಗಿದೆ’ ಎಂದು ಭಾರತ ಪ್ರತಿಪಾದಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ, ‘ಡಬ್ಲೂಟಿಒ ಒಪ್ಪಂದದ ಆಧಾರದಲ್ಲಿ ಯಾವುದೇ ಪ್ರತಿ ಸುಂಕವನ್ನು ಪ್ರಸ್ತಾಪಿಸುವ ಅಧಿಕಾರ ಭಾರತಕ್ಕಿಲ್ಲ’ ಎಂದಿದೆ.
‘ದೇಶಕ್ಕೆ ಆಮದಾಗುವ ವಸ್ತುಗಳನ್ನು ನಿಯಂತ್ರಿಸುವ ಉದ್ದೇಶದಿಂದ ಮತ್ತು ಅದರಿಂದ ಅಮೆರಿಕದ ಭದ್ರತೆಗೆ ಎದುರಾಗುವ ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರವು ಪ್ರತಿ ಸುಂಕವನ್ನು ವಿಧಿಸುತ್ತಿದೆ’ ಎಂದು ವಿಶ್ವ ವ್ಯಾಪಾರ ಸಂಘಟನೆಗೆ ಅಮೆರಿಕ ಲಿಖಿತ ಮಾಹಿತಿ ನೀಡಿದೆ.
‘ಇವು ಯಾವುವೂ ಮುಂಜಾಗ್ರತಾ ಕ್ರಮಗಳಲ್ಲ. ಹಾಗೆಯೇ, ಈ ಕ್ರಮಗಳ ಕುರಿತು ಒಪ್ಪಂದದಲ್ಲಿರುವ ಅಂಶಗಳಿಗೆ ರಿಯಾಯಿತಿ ರದ್ದುಪಡಿಸುವ ಅಥವಾ ಇನ್ನಿತರ ಕಟ್ಟುಪಾಡುಗಳ ಕುರಿತ ಭಾರತದ ಪ್ರಸ್ತಾವಕ್ಕೆ ಯಾವುದೇ ಆಧಾರವಿಲ್ಲ. ಜತೆಗೆ ಡಬ್ಲೂಟಿಒ ಒಪ್ಪಂದವನ್ನು ಭಾರತವು ಅನುಸರಿಸುತ್ತಿಲ್ಲ’ ಎಂದು ಅಮೆರಿಕ ಆರೋಪಿಸಿದೆ.
ಉಕ್ಕು ಮತ್ತು ಅಲ್ಯುಮಿನಿಯಂ ಮೇಲಿನ ಸುಂಕವೂ ಡಬ್ಲೂಟಿಒ ಅಡಿಯಲ್ಲಿನ ಅಮೆರಿಕದ ಮುಂಜಾಗ್ರತಾ ಕ್ರಮಗಳಾಗಿವೆ ಎಂಬ ಭಾರತದ ಆರೋಪವನ್ನು ಅಮೆರಿಕ ತಿರಸ್ಕರಿಸಿದೆ.
ಇದರ ನಡುವೆಯೇ ಪ್ರತಿ ಸುಂಕ ವಿಧಿಸಲು ಭಾರತ ಕೆಲ ವಸ್ತುಗಳನ್ನು ಪಟ್ಟಿ ಮಾಡಿದ್ದು, ಅವುಗಳನ್ನು ಬಹಿರಂಗಪಡಿಸಿಲ್ಲ. 2019ರಲ್ಲೂ ಅಮೆರಿಕದ 28 ಉತ್ಪನ್ನಗಳ ಮೇಲೆ ಭಾರತ ಪ್ರತಿ ಸುಂಕ ವಿಧಿಸಿತ್ತು. ಇದರಲ್ಲಿ ಬಾದಾಮಿ, ಸೇಬು ಮತ್ತು ಕೆಲ ರಾಸಾಯನಿಕಗಳು ಸೇರಿದ್ದವು. 2025ರ ಜುಲೈನಲ್ಲಿ ವಾಹನಗಳ ಕೆಲ ಬಿಡಿಭಾಗಗಳ ಮೇಲೆ ಭಾರತ ಪ್ರತಿ ಸುಂಕ ವಿಧಿಸಿತ್ತು.
ಆಮದಾಗುವ ಅಲ್ಯುಮಿನಿಯಂ ಮತ್ತು ಉಕ್ಕಿನ ಮೇಲೆ ಇದೇ ವರ್ಷ ಮಾರ್ಚ್ 12ರಂದು ಅಮೆರಕವು ಮೊದಲು ಶೇ 25ರಷ್ಟು ತೆರಿಗೆ ವಿಧಿಸಿತ್ತು. ಜೂನ್ 3ರಂದು ಇದನ್ನು ಪರಿಷ್ಕರಿಸಿ ಶೇ 50ರಷ್ಟು ತೆರಿಗೆ ವಿಧಿಸಿತು.
ಭಾರತದ ಅಧಿಕಾರಿಗಳ ತಂಡವು ಸದ್ಯ ವಾಷಿಂಗ್ಟನ್‌ನಲ್ಲಿದ್ದು, ಉಭಯ ರಾಷ್ಟ್ರಗಳ ವ್ಯಾಪಾರ ಒಪ್ಪಂದ ಕುರಿತ ಐದನೇ ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ.
