ಚಿಕ್ಕಮಗಳೂರಿನಲ್ಲಿ ಎರಡು ದುರಂತಗಳು: ಮಾನಸಿಕ ಒತ್ತಡಕ್ಕೆ ಹೆಡ್ ಕಾನ್‌ಸ್ಟೇಬಲ್ ಆತ್ಮಹತ್ಯೆ, ಪ್ರೇಮ ವೈಫಲ್ಯಕ್ಕೆ ಯುವಕನಿಂದ ಆಘಾತಕಾರಿ ಕೃತ್ಯ!

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಬಾರ್ ಲೈನ್ ರಸ್ತೆಯಲ್ಲಿರುವ ಪೊಲೀಸ್ ಕ್ವಾಟರ್ಸ್‌ನಲ್ಲಿ ಹೆಡ್ ಕಾನ್‌ಸ್ಟೇಬಲ್ ಕಾಂತರಾಜ್ (45) ನೇಣು ಬಿಗಿದು ಆತ್ಮಹ*ತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಇನ್ನೊಂದು ಘಟನೆಯಲ್ಲಿ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಾಳೆಂದು ಅರೆಹುಚ್ಚನಾದ ಯುವಕ ತಲೆಗೆ ಬಾಟಲಿ ಹೊಡೆದುಕೊಂಡು ಅಳುತ್ತಾ ಕುಳಿತಿದ್ದಾನೆ.
ಮೂಲತಃ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯವರಾಗಿರುವ ಕಾಂತರಾಜ್ ಅವರು ಈಗಾಗಲೇ ಎ.ಎನ್.ಎಫ್. ಹಾಗೂ ಕಳಸ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಕಂಪ್ಯೂಟರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಪಘಾತವೊಂದರಲ್ಲಿ ತಮ್ಮ ಬಲಗಾಲನ್ನು ಕಳೆದುಕೊಂಡಿದ್ದ ಕಾಂತರಾಜ್, ಕೃತಕ ಕಾಲಿನಿಂದ ಕಷ್ಟಪಟ್ಟು ಕರ್ತವ್ಯ ನಿರ್ವಹಿಸುತ್ತಿದ್ದರು.
ದೈಹಿಕ ಅಂಗವೈಕಲ್ಯದಿಂದ ಉಂಟಾದ ನಿರಾಶೆ ಹಾಗೂ ಮಾನಸಿಕ ಖಿನ್ನತೆಯೇ ಅವರು ಆತ್ಮಹ*ತ್ಯೆ ಮಾಡಿಕೊಳ್ಳಲು ಕಾರಣವೆನ್ನಲಾಗಿದೆ. ಘಟನೆಯ ವೇಳೆ ಅವರ ಮನೆ ಬೇರಾರು ಇದ್ದಿರಲಿಲ್ಲ. ಕುಟುಂಬದವರು ಊರಿಗೆ ತೆರಳಿದ್ದರು ಎನ್ನಲಾಗಿದೆ. ಕಾಂತರಾಜ್ ಅವರು ಮಾನಸಿಕವಾಗಿ ತೀವ್ರ ಒತ್ತಡ ಅನುಭವಿಸುತ್ತಿದ್ದರು ಎಂಬುದು ಅವರ ಸಹೋದ್ಯೋಗಿಗಳ ಹೇಳಿಕೆಯಾಗಿದೆ. ಇನ್ನು ಸರ್ಕಾರಿ ನೌಕರನಾಗಿದ್ದರೂ ಸ್ವಯಂ ಸಾವಿಗೆ ಶರಣಾಗಲು ಬೇರಾವ ಕಾರಣ ಇರಬಹುದು ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ. ಪೊಲೀಸರ ಆತ್ಮಹತ್ಯೆ ಪ್ರಕರಣ ಮತ್ತೆ ಸಹೋದ್ಯೋಗಿಗಳ ಮೇಲೆ ಭಾರೀ ಮಾನಸಿಕ ಪ್ರಭಾವ ಬೀರಿರುವುದು ಸ್ಪಷ್ಟವಾಗಿದೆ.
ಹುಡುಗಿ ಕೈಕೊಟ್ಟ ಹೋದಳೆಂದು ಅರೆಹುಚ್ಚನಾದ ಯುವಕ:
ಪ್ರೀತಿ ವಿಫಲವಾದ ದುಃಖದಲ್ಲಿಯೇ ಅರೆಹುಚ್ಚನಾದ ಯುವಕ, ತನ್ನ ತಲೆಗೆ ಬಾಟಲಿಯಿಂದ ಹೊಡೆದುಕೊಂಡಿದ್ದಾನೆ. ತನ್ನ ತಲೆಯಲ್ಲಿ ರಕ್ತ ಹರಿಯುತ್ತಿದ್ದರೂ, ಸುಮ್ಮನೆ ಕುಳಿತಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್‌ಪೋಸ್ಟ್ ಬಳಿ ಗುರುವಾರ ಬೆಳಕಿಗೆ ಬಂದಿದೆ.
ತಮಿಳುನಾಡು ಮೂಲದ ಈ ಯುವಕ, ಕೆಲ ತಿಂಗಳ ಹಿಂದೆ ಕಾಫಿತೋಟದ ಕೆಲಸಕ್ಕಾಗಿ ಚಿಕ್ಕಮಗಳೂರು ಬಂದಿದ್ದರು. ಕೆಲಸದಲ್ಲಿಯೇ ಇಲ್ಲಿಯ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದರು. ಆದರೆ, ಕಾಲಕ್ರಮೇಣ ಹುಡುಗಿ ಕೈಕೊಟ್ಟು ಬೇರೆ ಯಾರೊಂದಿಗೋ ಮದುವೆಯಾಗಿದ್ದಾಳೆ. ಈ ಘಟನೆಯು ಯುವಕನ ಮನಸ್ಸಿಗೆ ಆಘಾತ ಉಂಟುಮಾಡಿ, ತಮಿಳುನಾಡಿಗೆ ಹಿಂದಿರುಗಿದಿದ್ದಾನೆ. ಆದರೆ, ಈ ದುಃಖ ಮರೆಯದ ಯುವಕ ಮತ್ತೆ ಇಂದೇ (ಜು.18) ಕೈಮರ ಚೆಕ್‌ಪೋಸ್ಟ್ ಬಳಿ ಬಂದು ಬಾಟಲಿಯೊಂದನ್ನು ತನ್ನ ತಲೆಗೆ ಹೊಡೆದು ರಕ್ತ ಹರಿಯುವ ಸ್ಥಿತಿಯಲ್ಲಿ ನಡು ರಸ್ತೆಯೇ ಸುಮ್ಮನೆ ಕುಳಿತಿದ್ದನು.
ಅಲ್ಲಿನ ಸಿಬ್ಬಂದಿ ಹಾಗೂ ಪೊಲೀಸರು ಆತನನ್ನು ತಕ್ಷಣ ಗಮನಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ಶಾರೀರಿಕ ಸ್ಥಿತಿ ಸ್ಥಿರವಿದ್ದರೂ, ಮಾನಸಿಕ ಸ್ಥಿತಿ ಅತ್ಯಂತ ಅಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ರೀತಿಯ ಘಟನೆಗಳು ಮುಂದುವರಿಯದಂತೆ ಮಾನಸಿಕ ಆರೋಗ್ಯದ ಮಹತ್ವ ಹಾಗೂ ಯುವಜನರಲ್ಲಿ ಪ್ರೇಮ ವಿಫಲತೆಗೆ ಹೇಗೆ ಸಮರ್ಥ ರೀತಿಯಲ್ಲಿ ಮುಖಾಮುಖಿಯಾಗಬೇಕು ಎಂಬ ಅರಿವು ಮೂಡಿಸುವುದು ಅವಶ್ಯಕವಾಗಿದೆ.
