ಪಾಕ್‌ನಲ್ಲಿ ಎರಡು ಪ್ರಮುಖ ಘಟನೆ: ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟ, ಖೈಬರ್‌ನಲ್ಲಿ ವಾಯುದಾಳಿಗೆ 30 ನಾಗರಿಕರ ಬಲಿ

ಇಸ್ಲಾಮಾಬಾದ್: ಪಾಕಿಸ್ತಾನದ ನೈಋತ್ಯ ನಗರವಾದ ಕ್ವೆಟ್ಟಾದಲ್ಲಿರುವ ಭದ್ರತಾ ಪಡೆಗಳ ಪ್ರಧಾನ ಕಚೇರಿಯ ಹೊರಗೆ ಮಂಗಳವಾರ ಪ್ರಬಲ ಬಾಂಬ್ ಸ್ಫೋಟಗೊಂಡಿದ್ದು , ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಫೋಟದ ಶಬ್ದ ಎಷ್ಟು ಪ್ರಬಲವಾಗಿತ್ತೆಂದರೆ ಅದು ಮೈಲುಗಳಷ್ಟು ದೂರದಿಂದ ಶಬ್ದ ಕೇಳಿಸಿತ್ತು ಎಂದು ನಿವಾಸಿಗಳು ಹೇಳಿದ್ದಾರೆ. ಫ್ರಾಂಟಿಯರ್ ಕಾನ್ಸ್ಟ್ಯಾಬ್ಯುಲರಿಯ ಮುಂದೆ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ ಮತ್ತು ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಕಳುಹಿಸಿವೆ. ಕಾರಿನಲ್ಲಿ ಬಾಂಬ್ ಇರಿಸಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಪಾಕಿಸ್ತಾನ ಸ್ಫೋಟ: ದಾಳಿಕೋರರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಯಾವುದೇ ಉಗ್ರರ ಗುಂಪು ತಕ್ಷಣಕ್ಕೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ, ಆದಾಗ್ಯೂ ಕ್ವೆಟ್ಟಾ ಪ್ರಾಂತೀಯ ರಾಜಧಾನಿಯಾಗಿರುವ ಬಲೂಚಿಸ್ತಾನದಲ್ಲಿ ನಾಗರಿಕರು ಮತ್ತು ಭದ್ರತಾ ಪಡೆಗಳನ್ನು ಹೆಚ್ಚಾಗಿ ಗುರಿಯಾಗಿಸಿಕೊಳ್ಳುವ ಪ್ರತ್ಯೇಕತಾವಾದಿ ಗುಂಪುಗಳ ಮೇಲೆ ಅನುಮಾನ ಮೂಡಿದೆ.
ಬಲೂಚಿಸ್ತಾನವು ಬಹಳ ಹಿಂದಿನಿಂದಲೂ ದಂಗೆಯ ತಾಣವಾಗಿದ್ದು, ಬಲೂಚ್ ಲಿಬರೇಶನ್ ಆರ್ಮಿಯಂತಹ ಗುಂಪುಗಳು ಬಲೂಚಿಸ್ತಾನದ ಪ್ರತ್ಯೇಕತೆಗಾಗಿ ಹೋರಾಡುತ್ತಿವೆ. ಮೂಲಗಳ ಪ್ರಕಾರ, ಪಾಕಿಸ್ತಾನ ಭದ್ರತಾ ಪಡೆಗಳು ದಾಳಿಯನ್ನು ವಿಫಲಗೊಳಿಸಿದ್ದು, ಕ್ವೆಟ್ಟಾದಲ್ಲಿರುವ ಫ್ರಾಂಟಿಯರ್ ಕಾರ್ಪ್ಸ್ ಪ್ರಧಾನ ಕಚೇರಿಗೆ ನುಸುಳಲು ಯತ್ನಿಸಿದ ನಾಲ್ವರು ಉಗ್ರರನ್ನು ಕೊಂದಿವೆ.
ಇತ್ತೀಚೆಗಷ್ಟೇ ನಡೆದ ಘಟನೆ
ಪಾಕಿಸ್ತಾನ ತನ್ನ ದೇಶದ ಮೇಲೆಯೇ ಬಾಂಬ್ ಎಸೆದು ತನ್ನದೇ 30 ನಾಗರಿಕರನ್ನು ಬಲಿಪಡೆದಿದೆ. ಇಂದು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನ ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಯುದ್ಧ ವಿಮಾನಗಳು ತಿರಾ ಕಣಿವೆಯ ಮಾಟ್ರೆ ದಾರಾ ಗ್ರಾಮದ ಮೇಲೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಎಂಟು ಬಾಂಬ್‌ಗಳನ್ನು ಬೀಳಿಸಿದೆ. ಇದರಿಂದಾಗಿ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ವಿನಾಶ ಉಂಟಾಯಿತು. ಇವು LS-6 ವರ್ಗದ ವಿನಾಶಕಾರಿ ಬಾಂಬ್‌ಗಳಾಗಿದ್ದು, ಇವುಗಳನ್ನು ಚೀನಾದ JF-17 ಯುದ್ಧ ವಿಮಾನಗಳಿಂದ ಬೀಳಿಸಲಾಗಿತ್ತು. ಕೊಲ್ಲಲ್ಪಟ್ಟವರೆಲ್ಲರೂ ನಾಗರಿಕರು.
ದಾಳಿಯ ಬಗ್ಗೆ ಪಾಕಿಸ್ತಾನ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಬಾಂಬ್ ದಾಳಿಯಲ್ಲಿ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ಸೂಚಿಸುತ್ತವೆ. ಸ್ಥಳೀಯ ನಿವಾಸಿಗಳ ಪ್ರಕಾರ, ಗ್ರಾಮಸ್ಥರು ನಿದ್ರಿಸುತ್ತಿದ್ದರು, ಆಗ ಅವರಿಗೆ ದೊಡ್ಡ ಸ್ಫೋಟಗಳ ಶಬ್ದ ಕೇಳಿ ಎಚ್ಚರವಾಯಿತು. ಬಾಂಬ್ ಸ್ಫೋಟವು ಎಷ್ಟು ವಿನಾಶಕಾರಿಯಾಗಿತ್ತೆಂದರೆ ಗ್ರಾಮದ ದೊಡ್ಡ ಭಾಗಗಳು ನಾಶವಾಗಿವೆ.