ಮಂಗಳೂರು: ನಿಷೇಧಾಜ್ಞೆ ಉಲ್ಲಂಘಿಸಿ ತಲವಾರು ಬೀಸಿದ ಇಬ್ಬರು ಆರೋಪಿಗಳು

ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಜಾರಿಯಲ್ಲಿದ್ದ ನಿಷೇಧಾಜ್ಞೆ ಸಂದರ್ಭ ಪಂಜಿಮೊಗರು ಹಾಗೂ ಶಾಂತಿನಗರ ಪ್ರದೇಶದಲ್ಲಿ ಮೇ 2ರಂದು ನಿಷೇಧಾಜ್ಞೆ ಜಾರಿಯಲ್ಲಿದ್ದ ಸಮಯದಲ್ಲಿ ಕೈಯಲ್ಲಿ ತಲವಾರು ಬೀಸುತ್ತಾ ದ್ವಿಚಕ್ರ ವಾಹನದಲ್ಲಿ ತಿರುಗಾಡಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಲು ಯತ್ನಿಸಿದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

‘ಬಿಜೈ ನಿವಾಸಿ ವಿಷ್ಣು (18) ಹಾಗೂ ಆಕಾಶಭವನದ ಕಾಪಿಕಾಡ್ ನಿವಾಸಿ ವೇಣುಗೋಪಾಲ್ ಬಹಿರಂಗವಾಗಿ ತಲವಾರು ಬೀಸುತ್ತಾ ತಿರುಗಾಡಿದ ಆರೋಪಿಗಳು. ಆರೋಪಿಗಳ ವರುದ್ಧ ಕಾವೂರು ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109 (ಕೊಲೆ ಯತ್ನ), ಸೆಕ್ಷನ್ 62 (ಅಪರಾಧಕ್ಕೆ ಯತ್ನ) ಸೆಕ್ಷನ್ 352 (ಶಾಂತಿಭಂಗ), ಸೆಕ್ಷನ್ 351 (2) (ಕ್ರಿಮಿನಲ್ ಬೆದರಿಕೆ) ಮತ್ತಿತರ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಆರೋಪಿಗಳಿಬ್ಬರು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ. ಬಾಡಿ ವಾರಂಟ್ ಮೂಲಕ ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
