ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಅಸ್ಥಿಪಂಜರ ಪತ್ತೆಗೆ ಟ್ವಿಸ್ಟ್

ಬೆಂಗಳೂರು: ಇಡೀ ಬೆಂಗಳೂರಿಗೆ ಶಾಕ್ ನೀಡಿದ್ದ ಬೇಗೂರು ಅಪಾರ್ಟ್‌ಮೆಂಟ್ ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಈಗ ದೊಡ್ಡ ತಿರುವು ದೊರೆತಿದೆ. ಖಾಸಗಿ ಆಸ್ಪತ್ರೆಯಲ್ಲಿ ನಡೆದ ಅಸ್ಥಿಪಂಜರದ ಪರೀಕ್ಷೆಯಲ್ಲಿ ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ. ಪತ್ತೆಯಾಗಿರುವ ಅಸ್ಥಿಪಂಜರ ಪುರುಷನದ್ದು ಎಂದು ಗೊತ್ತಾದ ಬೆನ್ನಲ್ಲೇ ಅನೇಕ ಪರೀಕ್ಷೆಗಳನ್ನು ನಡೆಸಲಾಯಿತು. ಈ ವೇಳೆ, ಮೂಳೆಗಳ ಮೇಲೆ ಯಾವುದೇ ಗಾಯದ ಗುರುತು ಪತ್ತೆಯಾಗದ ಹಿನ್ನೆಲೆ ಇದು ಕೊಲೆಯಲ್ಲ ಎಂಬ ವರದಿ ಬಂದಿದೆ.

ಅಸ್ಥಿಪಂಜರ ಪತ್ತೆಯಾದಗಿನಿಂದಲೂ ಕೊಲೆಯ ಅನುಮಾನ ಹೆಚ್ಚಾಗಿತ್ತು. ಆದರೆ ಪ್ರಾಥಮಿಕ ಪರೀಕ್ಷೆಯಲ್ಲಿ, ಕೊಲೆಯಲ್ಲ ಎಂಬುದು ಗೊತ್ತಾಗಿದೆ.

ಅಸ್ಥಿಪಂಜರದ ಪ್ರಾಥಮಿಕ ಪರೀಕ್ಷೆಯಲ್ಲಿ ಪತ್ತೆಯಾದ ಅಂಶಗಳೇನು?
- ಅಸ್ಥಿಪಂಜರ 153 ಸೆ.ಮೀ ಉದ್ದವುಳ್ಳ, 30ರಿಂದ 35 ವರ್ಷದ ವ್ಯಕ್ತಿಯದ್ದು.
- ಕೊಲೆ ಶಂಕೆ ಇಲ್ಲ.
- ಅಸ್ಥಿಪಂಜರದ ಮೇಲೆ ಯಾವುದೇ ಗಾಯಗಳು ಪತ್ತೆಯಾಗಿಲ್ಲ.
- ಯಾರಾದರೂ ಆಯತಪ್ಪಿ ಇಂಗುಗುಂಡಿಗೆ ಬಿದ್ದು ಸತ್ತಿರುವ ಶಂಕೆ.
- 2 ವರ್ಷದ ಹಿಂದೆ ಇಂಗುಗುಂಡಿಯ ನೀರಿನಲ್ಲಿ ಮುಳುಗಿ ಸತ್ತಿರುವ ಶಂಕೆ
- ಎಫ್ಎಸ್ಎಲ್ ವಿವಿಧ ವಿಭಾಗಗಳಲ್ಲಿ ಡಿಎನ್ಎ ಫಿಂಗರ್ ಪ್ರಿಂಟ್ ಸೇರಿದಂತೆ ಅನೇಕ ಪರೀಕ್ಷೆ ನಡೆಯಲಿದೆ

ಬೇಗೂರು ಪೊಲೀಸರು 2016ರ ನಂತರ ನಾಪತ್ತೆಯಾದವರ ಕೇಸ್ಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಯಾಕೆಂದರೆ, 2016ರಲ್ಲಿ ಅಪಾರ್ಟ್‌ಮೆಂಟ್ ಕಾಮಗಾರಿ ಪೂರ್ಣಗೊಂಡಿದ್ದು, ಅದರ ನಿರ್ಮಾಣದ ಕೊನೆ ಹಂತದಲ್ಲಿ ಇಂಗುಗುಂಡಿ ನಿರ್ಮಾಣವಾಗುತ್ತದೆ. ಹೀಗಾಗಿ 2016ರಲ್ಲಿ ಬೇಗೂರು ಸುತ್ತಮುತ್ತ ಕಾಣೆಯಾದ ಪುರುಷರ ಕೇಸ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಡಿಎನ್ಎ ವರದಿ ಬಂದ ನಂತರ ಕಾಣೆಯಾಗದವರ ಸಂಬಂಧಿಕರ ಡಿಎನ್ಎಗೆ ಹೋಲಿಕೆ ಮಾಡಿ ಮೃತನ ಮಾಹಿತಿ ಪತ್ತೆಮಾಡಲಾಗುತ್ತದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಇದೀಗ ಅಸ್ಥಿಪಂಜರದ ಪ್ರಕರಣ ಮತ್ತಷ್ಟು ಕುತೂಹಲ ಹುಟ್ಟಿಸಿದೆ.
