Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತುಮಕೂರು: ಸಿನಿಮೀಯ ಚೇಸಿಂಗ್ ನಡೆಸಿ ಚಿನ್ನದಂಗಡಿ ದರೋಡೆಕೋರರ ಸೆರೆ

Spread the love

ತುಮಕೂರು: ಸಿನಿಮಾ ಕಥೆಯನ್ನೇ ಮೀರಿಸುವ ರೋಚಕ ಚೇಸಿಂಗ್ ದೃಶ್ಯಕ್ಕೆ ತುಮಕೂರು (Tumakuru) ಜಿಲ್ಲೆ ಸೋಮವಾರ ಸಾಕ್ಷಿಯಾಗಿದೆ. ಶಿರಾ ತಾಲ್ಲೂಕಿನ ಕಳ್ಳಂಬೆಳ್ಳದ ಬೆಂಚೆಗೇಟ್ ಬಳಿ ಇರುವ ಜಗದಂಬಾ ಜ್ಯುವೆಲರಿ ಅಂಗಡಿ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ನಡೆದ ಕಾರ್ಯಾಚರಣೆ ವೇಳೆ, ರಾಷ್ಟ್ರೀಯ ಹೆದ್ದಾರಿಯನ್ನೇ ಕೆಲಕಾಲ ಬಂದ್ ಮಾಡಲಾಗಿತ್ತೆಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ. ಸ್ಥಳೀಯರ ಸಾಹಸಮಯ ಚೇಸಿಂಗ್ ಮತ್ತು ಪೊಲೀಸರ ಕ್ಷಿಪ್ರ ಕ್ರಮದಿಂದ ನಾಲ್ವರು ಆರೋಪಿಗಳು ಕೊನೆಗೂ ಬಲೆಗೆ ಬಿದ್ದಿದ್ದಾರೆ.

ಫೆಬ್ರವರಿ 22ರಂದು ಮಧ್ಯಾಹ್ನ ನಡೆದ ದರೋಡೆ ಬಳಿಕ ಬೊಲೇರೋ ಕಾರಿನಲ್ಲಿ ಪರಾರಿಯಾದ ಆರೋಪಿಗಳನ್ನು ಸ್ಥಳೀಯರು ಸುಮಾರು 8ರಿಂದ 10 ನಿಮಿಷಗಳ ಕಾಲ, ಅಂದಾಜು 15 ಕಿಲೋಮೀಟರ್‌ಗಳಷ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆನ್ನಟ್ಟಿದ್ದರು. ಆರೋಪಿಗಳ ಕಾರು ತಾವರೆಕೆರೆಯವರೆಗೆ ತಲುಪಿತ್ತು. ಇದೇ ವೇಳೆ ಚೇಸಿಂಗ್ ಮಾಡಿದ ಸ್ಥಳೀಯರು ಪೊಲೀಸರಿಗೆ ದರೋಡೆಕೋರರ ವಾಹನದ ಮಾಹಿತಿ ನೀಡಿದ್ದರು.

ಹೆದ್ದಾರಿ ಬಂದ್, ಬ್ಯಾರಿಕೇಡ್ ಹಾಕಿ ಬಲೆ

ಮಾಹಿತಿ ತಿಳಿದ ಪೊಲೀಸರು ತಾವರೆಕೆರೆಯಲ್ಲಿ ತಕ್ಷಣ ಬ್ಯಾರಿಕೇಡ್ ಹಾಕಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಆರೋಪಿಗಳಿಗೆ ಬಲೆ ಬೀಸಿದರು. ಆದರೆ ಪೊಲೀಸರು ಅಲರ್ಟ್ ಆಗಿರುವುದನ್ನು ಗಮನಿಸಿದ ಆರೋಪಿಗಳು ಹೆದ್ದಾರಿಯಲ್ಲೇ ಯೂ-ಟರ್ನ್ ತೆಗೆದುಕೊಂಡು ತಪ್ಪಿಸಿಕೊಂಡರು. ಕೆಲಕಾಲ ಪೊಲೀಸರ ಕೈಗೂ ಸಿಗದಂತೆ ಪರಾರಿಯಾದರು.

ಕಾಡಿಗೆ ಪರಾರಿ, ರಾತ್ರೋರಾತ್ರಿ ಕುಂಬಿಂಗ್

ತುಮಕೂರು ಜಿಲ್ಲೆ ಬಿಟ್ಟು ಓಡಿಹೋಗಲು ಸಾಧ್ಯವಾಗದೆ ಆರೋಪಿಗಳು ಹುಯಿಲು ದೊರೆ ಅರಣ್ಯ ಪ್ರದೇಶಕ್ಕೆ ತೆರಳಿ ಅಡಗಿಕೊಂಡರು. ಮಾಹಿತಿ ಆಧರಿಸಿ ಪೊಲೀಸರು ರಾತ್ರೋರಾತ್ರಿ ಕಾಡಿನಲ್ಲಿ ಕುಂಬಿಂಗ್ ಕಾರ್ಯಾಚರಣೆ ನಡೆಸಿದರು.

ಮೊದಲಿಗೆ ಡುಂಗರ್ ಸಿಂಗ್ ಎಂಬಾತ ಪೊಲೀಸರ ಬಲೆಗೆ ಬಿದ್ದ. ಬಳಿಕ ಮಧ್ಯರಾತ್ರಿ ಮಹೇಂದ್ರ ಸಿಂಗ್ ಹಾಗೂ ಮಧು ಸಿಂಗ್ ಬಂಧಿತರಾದರು. ಮುಂಜಾನೆ ಅದೇ ಕಾಡಿನಲ್ಲಿ ಅರವಿಂದ್ ಕೂಡ ಪತ್ತೆಯಾಗಿದ್ದು, ಅರಣ್ಯದಲ್ಲಿದ್ದ ಮುರಿದು ಬಿದ್ದ ಬೃಹತ್ ಮರದ ಕೆಳಗೆ ಚಿನ್ನಾಭರಣಗಳನ್ನು ಬಚ್ಚಿಟ್ಟಿರುವುದು ಪತ್ತೆಯಾಯಿತು.

ಚಿನ್ನ ಸಮೇತ ಆರೋಪಿಗಳ ಬಂಧನ

ಪೊಲೀಸರು ಕಳವು ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸ್ಥಳೀಯರ ಧೈರ್ಯ ಹಾಗೂ ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮೀಯ ಚೇಸಿಂಗ್‌ನ ರೋಚಕ ದೃಶ್ಯಗಳು ಇದೀಗ ವೈರಲ್ ಆಗುತ್ತಿದ್ದು, ಗಮನ ಸೆಳೆಯುತ್ತಿವೆ.


Spread the love
Share:

administrator

Leave a Reply

Your email address will not be published. Required fields are marked *