ಟಿಟಿಪಿ ಉಗ್ರರ ದಾಳಿಗೆ ಮೂವರು ಪೊಲೀಸರು ಬಲಿ; ಖೈಬರ್ ಪಖ್ತುಂಖ್ವಾದಲ್ಲಿ ರಕ್ತಪಾತ

ಪೇಷಾವರ: ಪಾಕಿಸ್ತಾನದ ಖೈಬರ್ ಪತ್ತೊಂಕ್ವಾ ಪ್ರಾಂತದ ಕುಕ್ರಮ್ ಜಿಲ್ಲೆಯಲ್ಲಿ ಪೊಲೀಸರ ಮೇಲೆ ತೆಹೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ)ಯೊಂದಿಗೆ ಗುರುತಿಸಿಕೊಂಡಿರುವ ಸಶಸ್ತ್ರ ಹೋರಾಟಗಾರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಪೊಲೀಸರು ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ದಾಳಿಯ ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರೂ ಹತರಾಗಿದ್ದಾರೆ. ಪ್ರದೇಶಕ್ಕೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ರವಾನಿಸಲಾಗಿದೆ ಎಂದು ವರದಿ ಹೇಳಿದೆ. ಈ ಮಧ್ಯೆ, ಲಾಹೋರ್ ನ ಹೊರವಲಯದಲ್ಲಿ ಶನಿವಾರ ಈದ್ ಪ್ರಾರ್ಥನೆಯ ಬಳಿಕ ಲಷ್ಕರ್-ಎ-ತೈಬಾ(ಎಲ್ಇಟಿ) ಭಯೋತ್ಪಾದಕ ಸಂಘಟನೆಯ ಕಮಾಂಡರ್ ಬಿಲಾಲ್ ಆರಿಫ್ ಸರಾಫಿಯನ್ನು ಕುಟುಂಬದ ಸದಸ್ಯರೇ ಚೂರಿಯಿಂದ ಇರಿದ ಬಳಿಕ ಗುಂಡಿಕ್ಕಿ ಹತ್ಯೆ ನಡೆಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.
ವಿಶ್ವಸಂಸ್ಥೆಯು ಭಯೋತ್ಪಾದಕ ಪಟ್ಟಿಯಲ್ಲಿ ಗುರುತಿಸಿರುವ ಎಲ್ಇಟಿಯೊಂದಿಗೆ ಬಿಲಾಲ್ ಸರಾಫಿ 2005ರಿಂದ ಸಂಪರ್ಕದಲ್ಲಿದ್ದು ಎಲ್ಇಟಿಗೆ ದೇಣಿಗೆ ಸಂಗ್ರಹಿಸುವ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದ ಎಂದು ವರದಿ ಹೇಳಿದೆ.
