ಟ್ರಂಪ್ ಶೇ.50 ಟ್ಯಾರಿಫ್: ಭಾರತೀಯ ಸರಕು ಖರೀದಿ ನಿಲ್ಲಿಸಿದ ಅಮೆರಿಕ ರೀಟೇಲರ್‌ಗಳು

ನವದೆಹಲಿ: ಭಾರತದ ಸರಕುಗಳ ಮೇಲೆ ಡೊನಾಲ್ಡ್ ಟ್ರಂಪ್ ಶೇ. 50ರಷ್ಟು ಟ್ಯಾರಿಫ್ ಹೇರಿದ ಬೆನ್ನಲ್ಲೇ ಇದೀಗ ಅಮೆರಿಕದ ಪ್ರಮುಖ ರೀಟೇಲ್ ಮಾರಾಟಗಾರರು ಭಾರತದಿಂದ ಸರಕುಗಳ ಖರೀದಿಯನ್ನು ನಿಲ್ಲಿಸಿದ್ದಾರೆ. ಎನ್ಡಿಟಿವಿ ಪ್ರಾಫಿಟ್ನಲ್ಲಿ ಈ ಬಗ್ಗೆ ವರದಿ ಬಂದಿದ್ದು, ಭಾರತದ ಜವಳಿ ಉದ್ಯಮದ ಮೇಲೆ ಇದು ದೊಡ್ಡ ಪರಿಣಾಮ ಬೀರುತ್ತಿರುವುದು ನಿಚ್ಚಳವಾಗಿದೆ.

ಭಾರತದ ಸರಕುಗಳ ಮೇಲೆ ಅಮೆರಿಕ ಶೇ. 50 ಸುಂಕ ವಿಧಿಸುತ್ತಿರುವುದರಿಂದ ರಫ್ತು ವೆಚ್ಚ ಅಧಿಕವಾಗುತ್ತಿದೆ. ಸುಂಕದ ವೆಚ್ಚದ ಹೊರೆಯನ್ನು ರಫ್ತುದಾರರೇ ಭರಿಸಬೇಕೆಂದು ಅಮೆರಿಕನ್ ಮಾರಾಟಗಾರರು ಹೇಳುತ್ತಿದ್ದಾರೆ. ಅಂದರೆ, ಭಾರತೀಯ ಕಂಪನಿಗಳು ತಮ್ಮ ಸರಕುಗಳನ್ನು ಶೇ. 50ರಷ್ಟು ಕಡಿಮೆ ಬೆಲೆಗೆ ರಫ್ತು ಮಾಡಬೇಕಾದ ಪರಿಸ್ಥಿತಿ ಬಂದಿದೆ.
ವರದಿ ಪ್ರಕಾರ, ರಫ್ತು ವೆಚ್ಚ ಶೇ. 30-35ರಷ್ಟು ಹೆಚ್ಚಾಗಬುದು. ಇದರಿಂದ ಅಮೆರಿಕಕ್ಕೆ ರಫ್ತಾಗುವ ಈ ಉದ್ಯಮದ ಸರಕುಗಳಲ್ಲಿ ಶೇ. 40-50ರಷ್ಟು ಇಳಿಮುಖವಾಗಬಹುದು. ಉದ್ಯಮದ ಅಂದಾಜು ಪ್ರಕಾರ, ಹೀಗಾದಲ್ಲಿ ಜವಳಿ ಉದ್ಯಮಕ್ಕೆ 4-5 ಬಿಲಿಯನ್ ಡಾಲರ್ನಷ್ಟು ನಷ್ಟವಾಗಬಹುದು.
ಭಾರತದ ಪ್ರಮುಖ ಗಾರ್ಮೆಂಟ್ಸ್ ಕಂಪನಿಗಳಾದ ವೆಲ್ಸ್ಪನ್ ಲಿವಿಂಗ್, ಗೋಕಲ್ದಾಸ್ ಎಕ್ಸ್ಪೋರ್ಟ್ಸ್, ಇಂಡೋ ಕೌಂಟ್, ಟ್ರಿಡೆಂಟ್ ಮೊದಲಾದವುಗಳ ಪ್ರಮುಖ ಮಾರುಕಟ್ಟೆ ಅಮೆರಿಕವೇ ಆಗಿದೆ. ಇವುಗಳ ಮಾರಾಟ ಶೇ. 40-70ರಷ್ಟು ಕಡಿಮೆ ಆಗುವ ಸಂಭವ ಇದೆ.
ಬಾಂಗ್ಲಾ, ವಿಯೆಟ್ನಾಂಗಳ ಮೇಲುಗೈ
ಬಾಂಗ್ಲಾದೇಶ, ವಿಯೆಟ್ನಾಂ ಮೊದಲಾದ ದೇಶಗಳು ಗಾರ್ಮೆಂಟ್ಸ್ ಉದ್ಯಮದಲ್ಲಿ ಪ್ರಬಲವಾಗಿವೆ. ಇವುಗಳಿಗೆ ಅಮೆರಿಕ ಶೇ. 20ರಷ್ಟು ಮಾತ್ರವೇ ಟ್ಯಾರಿಫ್ ಹಾಕಿರುವುದು. ಭಾರತಕ್ಕಿರುವ ಶೇ. 50ಕ್ಕೆ ಹೋಲಿಸಿದರೆ ಈ ಟ್ಯಾರಿಫ್ ಕಡಿಮೆ. ಹೀಗಾಗಿ, ಅಮೆರಿಕ ಇಕಾಮರ್ಸ್ ಕಂಪನಿಗಳು ಭಾರತೀಯ ಕಂಪನಿಗಳ ಬದಲು ಬಾಂಗ್ಲಾ, ವಿಯೆಟ್ನಾಂ ಮೊದಲಾದ ದೇಶಗಳ ಗಾರ್ಮೆಂಟ್ಸ್ ಕಂಪನಿಗಳಿಂದ ಖರೀದಿಸಲು ಮುಂದಾಗಬಹುದು.
