ಟ್ರಂಪ್‌ನಿಂದ ಮತ್ತೊಮ್ಮೆ ಪ್ರಯಾಣ ನಿಷೇಧ: 12 ರಾಷ್ಟ್ರಗಳಿಗೆ ಅಮೆರಿಕದ ಬಾಗಿಲು ಮುಚ್ಚು!

ಅಮೆರಿಕ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಸೇರಿದಂತೆ 12 ದೇಶಗಳಿಗೆ ದೊಡ್ಡ ಆಘಾತ ನೀಡಿದ್ದಾರೆ. ಆ ದೇಶಗಳ ನಾಗರಿಕರು ಅಮೆರಿಕಕ್ಕೆ ಪ್ರವೇಶಿಸದಂತೆ ಪ್ರಯಾಣ ನಿಷೇಧ ಹೇರುತ್ತಿರುವುದಾಗಿ ಘೋಷಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.

ಮುಂದಿನ ಸೋಮವಾರ (ಜೂನ್ 9) ದಿಂದ ನಿಷೇಧ ಜಾರಿಗೆ ಬರಲಿದೆ ಎಂದು ಟ್ರಂಪ್ ಘೋಷಣೆ ಮಾಡಿದ್ದಾರೆ.
ಈ ಪಟ್ಟಿಯಲ್ಲಿ ಇರಾನ್, ಲಿಬಿಯಾ, ಅಫ್ಘಾನಿಸ್ತಾನ, ಮ್ಯಾನ್ಮಾರ್, ಚಾಡ್, ಕಾಂಗೋ, ಈಕ್ವಟೋರಿಯಲ್ ಗಿನಿಯಾ, ಹೈಟಿ, ಸೊಮಾಲಿಯಾ, ಸುಡಾನ್, ಯೆಮೆನ್ ಮತ್ತು ಎರಿಟ್ರಿಯಾ ಸೇರಿವೆ. ಇವುಗಳ ಜೊತೆಗೆ, ಇತರ ಏಳು ದೇಶಗಳ ಮೇಲೆ ತಾತ್ಕಾಲಿಕ ನಿಷೇಧವನ್ನು ವಿಧಿಸಿದ್ದಾರೆ. ಇವುಗಳಲ್ಲಿ ಬುರುಂಡಿ, ವೆನೆಜುವೆಲಾ, ಕ್ಯೂಬಾ, ಲಾವೋಸ್, ಸಿಯೆರಾ ಲಿಯೋನ್, ಟೋಗೊ ಮತ್ತು ತುರ್ಕಮೆನಿಸ್ತಾನ್ ಸೇರಿವೆ.
ಈ ಕುರಿತು ಶ್ವೇತಭವನ ಹೇಳಿಕೆ ನೀಡಿದೆ. ವೀಸಾ ಅರ್ಜಿದಾರರ ಸರಿಯಾದ ಹಿನ್ನೆಲೆ ಪರಿಶೀಲನೆಗಳ ಕೊರತೆ ಮತ್ತು ವೀಸಾ ಅವಧಿ ಮುಗಿದ ನಂತರವೂ ಅವರು ಅಮೆರಿಕದಲ್ಲಿಯೇ ಇರುವುದು ಭದ್ರತಾ ಅಪಾಯಗಳನ್ನು ಉಂಟುಮಾಡುತ್ತದೆ. ಅಧ್ಯಕ್ಷ ಟ್ರಂಪ್ ಅಮೆರಿಕನ್ನರನ್ನು ಅಪಾಯಕಾರಿ ವಿದೇಶಿ ಶಕ್ತಿಗಳಿಂದ ರಕ್ಷಿಸುವ ಭರವಸೆ ನೀಡಿದ್ದಾರೆ. ಇದೀಗ ತಮ್ಮ ಭರವಸೆಯನ್ನು ಈಡೇರಿಸುತ್ತಿದ್ದಾರೆ ಎಂದು ಶ್ವೇತಭವನ ವಕ್ತಾರ ಅಬಿಗೈಲ್ ಜಾಕ್ಸನ್ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ.
ಅಫ್ಘಾನಿಸ್ತಾನ ತಾಲಿಬಾನ್ ಆಡಳಿತದ ನಿಯಂತ್ರಣದಲ್ಲಿದ್ದರೆ, ಇರಾನ್ ಮತ್ತು ಕ್ಯೂಬಾದಂತಹ ದೇಶಗಳ ಸರ್ಕಾರಗಳು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವ ಆರೋಪವಿದೆ. ಇನ್ನು ಚಾಡ್ ಮತ್ತು ಎರಿಟ್ರಿಯಾದಂತಹ ದೇಶಗಳ ನಾಗರಿಕರು ವೀಸಾ ಅವಧಿ ಮುಗಿದ ನಂತರವೂ ಅಮೆರಿಕದಲ್ಲಿಯೇ ನೆಲೆಸಿದ್ದಾರೆ. ಹೀಗಾಗಿ ಅಮೆರಿಕ ಈ ನಿಷೇಧವನ್ನು ವಿಧಿಸಿದೆ ಎಂದು ಹೇಳಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಟ್ರಂಪ್ ‘ವಿದೇಶಿ ಭಯೋತ್ಪಾದಕರಿಂದ ಅಮೆರಿಕವನ್ನು ರಕ್ಷಿಸುವುದು’ ಎಂದು ಘೋಷಿಸಿರುವುದು ಗಮನಾರ್ಹ.
ಅಂದಹಾಗೆ, ಟ್ರಂಪ್ ಅವರು ಅಧ್ಯಕ್ಷರಾಗಿ ತಮ್ಮ ಮೊದಲ ಅವಧಿಯಲ್ಲಿ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದರು. 2017 ರಲ್ಲಿ ಅವರು ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಇರಾಕ್, ಇರಾನ್, ಸಿರಿಯಾ, ಸುಡಾನ್, ಲಿಬಿಯಾ, ಯೆಮೆನ್ ಮತ್ತು ಸೊಮಾಲಿಯಾ ದೇಶದ ನಾಗರಿಕರು ಅಮೆರಿಕಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದ್ದರು. ಆದಾಗ್ಯೂ, ಜೋ ಬೈಡೆನ್ ಅಧಿಕಾರಕ್ಕೆ ಬಂದ ನಂತರ 2021 ರಲ್ಲಿ ಅದನ್ನು ತೆಗೆದುಹಾಕಲಾಯಿತು. ಇದೀಗ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವ ಟ್ರಂಪ್ ಮತ್ತೆ ನಿಷೇಧ ಹೇರಿದ್ದಾರೆ.
