‘ನಿಜವಾದ ಪ್ರೀತಿಯನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ’: ಪೋಕ್ಸೋ ಕಾಯ್ದೆ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ

ನವದೆಹಲಿ: ಅಪ್ರಾಪ್ತ ವಯಸ್ಕರ ನಡುವಿನ ನಿಜವಾದ ಪ್ರೇಮ ಸಂಬಂಧವನ್ನು ಅತ್ಯಾ*ರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಪ್ರೀತಿ ಮಾಡುವುದನ್ನು ಕ್ರಿಮಿನಲ್ ಕೃತ್ಯ ಎಂದು ಪರಿಗಣಿಸಬೇಕೇ ಎಂದು ಪ್ರಶ್ನಿಸಿದೆ. ಸಮ್ಮತಿಯ ಪ್ರೀತಿಗೆ ಇರುವ ವಯೋಮಿತಿಯನ್ನು 18ರಿಂದ 16 ವರ್ಷಗಳಿಗೆ ಇಳಿಸುವ ಕುರಿತು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.

ಬಿ.ವಿ. ನಾಗರತ್ನಾ ಹಾಗೂ ನ್ಯಾ. ಆರ್. ಮಹಾದೇವನ್ ಅವರ ಪೀಠ, ಪೋಕ್ಸೋ ಕಾಯ್ದೆಯ ದುರುಪಯೋಗದ ಕುರಿತು ಕಳವಳ ವ್ಯಕ್ತಪಡಿಸಿತು.
‘ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯುವಕ-ಯುವತಿಯರು ಒಟ್ಟಿಗೆ ಕಲಿಯುವಾಗ ಪರಸ್ಪರ ಭಾವನೆ ಬೆಳೆಸಿಕೊಳ್ಳುತ್ತಾರೆ. ಪ್ರೀತಿಯನ್ನು ಅಪರಾಧ ಎಂದು ಹೇಳಬಹುದೇ? ಅತ್ಯಾ*ರದ ಅಪರಾಧಕ್ಕೂ ಇದಕ್ಕೂ ವ್ಯತ್ಯಾಸವಿದೆ. ನಿಜವಾದ ಪ್ರೀತಿಯ ಸಂಬಂಧಗಳಲ್ಲಿ, ಯುವಕ-ಯುವತಿಯರು ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಲು ಬಯಸಿದರೆ, ಅಂತಹ ಪ್ರಕರಣಗಳನ್ನು ಅಪರಾಧದಂತೆ ಪರಿಗಣಿಸಬಾರದು’ ಎಂದು ಪೀಠ ತಿಳಿಸಿತು.
‘ಹೆಣ್ಣಿನ ಪೋಷಕರು ತಮ್ಮ ಮಗಳು ಪ್ರೀತಿಸುತ್ತಿರುವ ಹುಡುಗನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ, ಜೈಲಿಗೆ ಕಳುಹಿಸುವ ಘಟನೆಗಳು ನಡೆಯುತ್ತಿವೆ. ಕೆಲವೊಮ್ಮೆ ಮಕ್ಕಳು ಓಡಿಹೋಗಿದ್ದನ್ನು ಮರೆಮಾಚಲು ಕೂಡ ಪೋಕ್ಸೋ ಅಡಿ ಪ್ರಕರಣ ದಾಖಲಿಸಲಾಗುತ್ತದೆ. ಇದು ಸಮಾಜದ ಕಠೋರ ವಾಸ್ತವ’ ಎಂದು ಕಳವಳ ವ್ಯಕ್ತಪಡಿಸಿತು.
65 ಲಕ್ಷ ಬಿಹಾರ ಮತದಾರರ ಕೈಬಿಟ್ಟಿದ್ದೇಕೆ?: ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್ಆರ್ಐ) ಪ್ರಕ್ರಿಯೆ ವೇಳೆ ಮತದಾರರ ಕರಡು ಪಟ್ಟಿಯಿಂದ ತೆಗೆದುಹಾಕಲಾಗಿರುವ 65 ಲಕ್ಷ ಜನರ ಪಟ್ಟಿಯನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಇದರ ಬೆನ್ನಲ್ಲೇ ಎಲ್ಲ ರಾಜಕೀಯ ಪಕ್ಷಗಳಿಗೆ ಪಟ್ಟಿ ವಿತರಣೆ ಆರಂಭಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಇದಕ್ಕೂ ಮುನ್ನ ಎಸ್ಆರ್ಐ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವಿಚಾರಣೆ ನಡೆಸಿದ ನ್ಯಾ। ಸೂರ್ಯಕಾಂತ್ ಮತ್ತು ಜೋಯ್ಮಲ್ಯಾ ಬಾಗ್ಚಿ ಅವರ ಪೀಠ, ‘ಮೃತಪಟ್ಟಿರುವವರು, ವಲಸೆ ಹೋದವರು, ಕ್ಷೇತ್ರ ಬದಲಿಸಿದವರು ಸೇರಿದಂತೆ ಎಲ್ಲರ ಮಾಹಿತಿಯುಳ್ಳ ಪಟ್ಟಿ ಪ್ರಕಟಿಸಬೇಕು ಹಾಗೂ ಅವರನ್ನು ತೆಗೆದುಹಾಕಿದ ಕಾರಣವನ್ನು ಕೊಡಬೇಕು.
ಅಂತರ್ಜಾಲದಲ್ಲಿ ಅದರಲ್ಲಿ ಹೆಸರು ಹುಡುಕುವ (ಸರ್ಚ್) ಸವಲತ್ತು ಇರಬೇಕು’ ಎಂದು ಸೂಚಿಸಿತು. ಜತೆಗೆ ಈ ಪಟ್ಟಿಯು ಎಲ್ಲಿ ಲಭ್ಯವಾಗಲಿದೆ ಎಂಬ ಬಗ್ಗೆ ಟೀವಿ, ರೇಡಿಯೋ, ಸ್ಥಳೀಯ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿತು. ಮತದಾರರು ಮತಸಂಖ್ಯೆಯನ್ನು ನಮೂದಿಸುವ ಮೂಲಕ ಪಟ್ಟಿಯಲ್ಲಿ ತಮ್ಮ ಕುರಿತ ಮಾಹಿತಿಯನ್ನು ನೋಡುವಂತೆ ಮಾಡಬೇಕು ಎಂದ ಪೀಠ, ಮತಪಟ್ಟಿಯಿಂದ ಹೆಸರು ಅಳಿಸಲ್ಪಟ್ಟವರು ಆಧಾರ್ ಕಾರ್ಡ್ನೊಂದಿಗೆ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿದೆ. ಇದರ ಮುಂದಿನ ವಿಚಾರಣೆ ಆ.22ಕ್ಕೆ ನಡೆಯಲಿದೆ.