ಭಾರತದ ಐಟಿ ಕಂಪನಿಗಳಿಗೆ ಸಂಕಷ್ಟ: ಪ್ರಮುಖ ಗ್ರಾಹಕರಿಂದ ವ್ಯಾಪಾರ ಕುಸಿತ, ಉದ್ಯೋಗ ಕಡಿತದ ಭೀತಿ?
ನವದೆಹಲಿ: ಭಾರತದ ಕೆಲ ಐಟಿ ಕಂಪನಿಗಳ ಬ್ಯುಸಿನೆಸ್ ಕಡಿಮೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ಜಾಗತಿಕವಾಗಿ ಅನಿಶ್ಚಿತ ಪರಿಸ್ಥಿತಿ ಇರುವುದರಿಂದ ವಿವಿಧ ಕಂಪನಿಗಳು ವೆಚ್ಚ ಕಡಿತ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಐಟಿ ಸರ್ವಿಸ್ಗೆ ಮಾಡುತ್ತಿರುವ ವೆಚ್ಚಕ್ಕೂ ಸಹಜವಾಗಿ ಕತ್ತರಿ ಹಾಕಲಾಗುತ್ತಿದೆ.
ಭಾರತದ ಅತಿದೊಡ್ಡ ಐಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಇನ್ಫೋಸಿಸ್ ಕಳೆದ ವರ್ಷ ತಮ್ಮ ಪ್ರಮುಖ ಕ್ಲೈಂಟ್ಗಳಿಂದ ಕಡಿಮೆ ಬ್ಯುಸಿನೆಸ್ ಪಡೆದಿವೆ ಎಂದು ಕಮ್ಯೂನಿಕೇಶನ್ಸ್ ಟುಡೇಯಲ್ಲಿ ವರದಿಯಾಗಿದೆ.
ಸಿಟಿಗ್ರೂಪ್ ಮತ್ತು ಪೋಸ್ಟ್ಬ್ಯಾಂಕ್ನಿಂದ ಟಿಸಿಎಸ್ಗೆ ಸಿಗುತ್ತಿರುವ ಪ್ರಾಜೆಕ್ಟ್ ಕಡಿಮೆ ಆಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ನ ಅತಿದೊಡ್ಡ ಕ್ಲೈಂಟ್ಗಳ ಸಾಲಿನಲ್ಲಿ ಇವೆರಡು ಕಂಪನಿಗಳು ಬರುತ್ತವೆ. ಪೋಸ್ಟ್ಬ್ಯಾಂಕ್ ಎನ್ನುವುದು ಡ್ಯೂಷೆ ಬ್ಯಾಂಕ್ನ ಅಂಗಸಂಸ್ಥೆಯಾಗಿದೆ.
ಇನ್ನು ಇನ್ಫೋಸಿಸ್ನ ಪ್ರಮುಖ ಕ್ಲೈಂಟ್ ಆದ ಡೈಮ್ಲರ್ ಎಜಿ ಕಂಪನಿ ಕೂಡ ಕಡಿಮೆ ಬ್ಯುಸಿನೆಸ್ ನೀಡಿದೆ. ಡೈಮ್ಲರ್ ಜರ್ಮನಿಯ ಆಟೊಮೋಟಿವ್ ಕಂಪನಿಯಾಗಿದೆ.
ಇತರ ಸಣ್ಣ ಐಟಿ ಕಂಪನಿಗಳ ಸ್ಥಿತಿಯೂ ಇದೇ ರೀತಿಯದ್ದಿದೆ. ದಿ ಮಿಂಟ್ ಪತ್ರಿಕೆಯ ವರದಿ ಪ್ರಕಾರ ಹೆಕ್ಸಾವೇರ್ ಟೆಕ್ನಾಲಜೀಸ್ ಸಂಸ್ಥೆಯು ಫ್ಯಾನೀ ಮೀ ಕಂಪನಿಯಿಂದ ಕಡಿಮೆ ಬ್ಯುಸಿನೆಸ್ ಪಡೆದಿದೆ. ಫ್ಯಾನೀ ಮೀ ಹೆಕ್ಸಾವೇರ್ ಟೆಕ್ನಾಲಜೀಸ್ನ ಮೂರು ಪ್ರಮುಖ ಕ್ಲೈಂಟ್ಗಳಲ್ಲಿ ಒಂದು.
ಎಂಫೇಸಿಸ್ಗೆ ಫೆಡೆಕ್ಸ್ ಬ್ಯುಸಿನಸ್ ಕಡಿಮೆಗೊಂಡಿದೆ. ಎಲ್ಟಿಐ ಮೈಂಡ್ಟ್ರೀ ಮತ್ತು ಸೊನಾಟ ಸಾಫ್ಟ್ವೇರ್ ಕಂಪನಿಗಳಿಗೆ ಮೈಕ್ರೋಸಾಫ್ಟ್ನಿಂದ ಸಿಗುತ್ತಿದ್ದ ಬ್ಯುಸಿನೆಸ್ ಕೂಡ ತಗ್ಗಿದೆ ಎಂದು ಲೈವ್ ಮಿಂಟ್ ಪತ್ರಿಕೆ ವರದಿ ಮಾಡಿದೆ.
ಭಾರತದ ಐಟಿ ವಲಯದ ಒಟ್ಟಾರೆ ಆದಾಯದಲ್ಲಿ ಗಣನೀಯ ಎನಿಸುವಷ್ಟು ಆದಾಯ ಕುಸಿತ ಆಗಿಲ್ಲ. ಆದರೆ, ಕೆಲ ಐಟಿ ಕಂಪನಿಗಳ ಪ್ರಮುಖ ಕ್ಲೈಂಟ್ಗಳಿಂದ ಗಮನಾರ್ಹ ಎನಿಸುವಷ್ಟು ಬ್ಯುಸಿನೆಸ್ ಡೌನ್ ಆಗಿರುವುದು ವಾಸ್ತವ ಎಂದೆನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಐಟಿ ಕಂಪನಿಗಳಿಂದ ಅಧಿಕೃತ ಹೇಳಿಕೆ ಬಂದಿಲ್ಲ.
ಕಂಪನಿಗಳಿಗೆ ಆದಾಯ ಕಡಿಮೆ ಆದರೆ ಸಹಜವಾಗಿ ವೆಚ್ಚ ಕಡಿತಕ್ಕೆ ಮುಂದಾಗುತ್ತವೆ. ಪರಿಣಾಮವಾಗಿ ಉದ್ಯೋಗ ಕಡಿತಕ್ಕೆ ಮುಂದಾಗುವ ಸಾಧ್ಯತೆ ಇಲ್ಲದಿಲ್ಲ.