ʼಬಾಹ್ಯಾಕಾಶ ಹೀರೋʼ ಶೂಭಾಂಶು ಶುಕ್ಲಾಗೆ ಪತ್ನಿ-ಮಗನಿಂದ ಅಪ್ಪುಗೆಯ ಸ್ವಾಗತ

ನ್ಯೂಯಾರ್ಕ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಯಶಸ್ವಿಯಾಗಿ ತಲುಪಿ ಇತಿಹಾಸ ಸೃಷ್ಟಿಸಿ ಭೂಮಿಗೆ ಮರಳಿರುವ ಶುಭಾಂಶು ಶುಕ್ಲಾ ಅವರನ್ನು ಪತ್ನಿ ಹಾಗೂ ಪುತ್ರ ಅಪ್ಪುಗೆಯ ಮೂಲಕ ಸ್ವಾಗತ ಕೋರಿದ್ದಾರೆ.

18 ದಿನಗಳ ಬಾಹ್ಯಾಕಾಶ ವಾಸದ ನಂತರ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಶುಭಾಂಶು ಶುಕ್ಲಾ ಅವರು ತಮ್ಮ ಪತ್ನಿ ಕಾಮ್ನಾ ಹಾಗೂ ಪುತ್ರ ಕಿಯಾಶ್ ಅವರನ್ನು ಭೇಟಿಯಾದರು. ಎರಡು ತಿಂಗಳ ಬಳಿಕ ಶುಕ್ಲಾ ಅವರು ತಮ್ಮ ಕುಟುಂಬಸ್ಥರನ್ನು ಭೇಟಿಯಾಗಿದ್ದು, ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ
ಪೋಸ್ಟ್‌ನಲ್ಲಿ, ಇಷ್ಟು ದಿನಗಳ ಬಳಿಕ ಭೂಮಿಗೆ ಹಿಂತಿರುಗಿ ನನ್ನ ಕುಟುಂಬವನ್ನು ಬಿಗಿದಪ್ಪಿಕೊಂಡಿದ್ದು, ನನ್ನ ಮನೆಯನ್ನೇ ನೋಡಿದಂತೆ ಭಾಸವಾಯಿತು. ಬಾಹ್ಯಾಕಾಶದಲ್ಲಿನ ಹಾರಾಟ ಎಷ್ಟು ಅದ್ಭುತವೋ, ಹಾಗೆಯೇ ಬಹಳ ದಿನಗಳ ನಂತರ ನಮ್ಮ ಪ್ರೀತಿ ಪಾತ್ರರನ್ನು ನೋಡುವುದು ಅಷ್ಟೇ ಅದ್ಭುತ. ಬಹುದಿನಗಳ ಬಳಿಕ ನಿಮ್ಮ ಪ್ರೀತಿಪಾತ್ರರನ್ನು ನೋಡಿದಾಗಲೇ ಅವರು ನಿಮಗೆಷ್ಟು ಮುಖ್ಯ ಎನ್ನುವುದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.
ನಾಲ್ವರು ಗಗನಯಾತ್ರಿಗಳು ಭೂಮಿಗೆ ಮರಳುವ ಮುನ್ನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾವನಾತ್ಮಕ ಬೀಳ್ಕೊಡುಗೆ ಸಿಕ್ಕಿತು. ಶುಭಾಂಶು ಶುಕ್ಲಾ ಸಾರೇ ಜಹಾನ್ ಸೆ ಅಚ್ಚಾ ಎಂದು ಬಾಹ್ಯಾಕಾಶದಲ್ಲಿ ಭಾರತವನ್ನು ಭಾವನಾತ್ಮಕವಾಗಿ ಹೊಗಳಿದರು. ಈ ವೇಳೆ ರಾಕೇಶ್ ಶರ್ಮಾ 41 ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಸಮಯವನ್ನು ನೆನಪಿಸಿಕೊಂಡು, ಅಲ್ಲಿಂದ ಭಾರತ ಹೇಗೆ ಕಾಣುತ್ತದೆ ಎಂದು ವಿವರಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಭಾರತದ ಧ್ವಜ ಹಾರಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದ ಶುಭಾಂಶು ಶುಕ್ಲಾ ಸ್ವಾಗತಿಸಲು ಭಾರತೀಯರು ಉತ್ಸುಕರಾಗಿದ್ದಾರೆ.
