ಬುಡಕಟ್ಟು ಸಂಪ್ರದಾಯದ ಶುದ್ಧೀಕರಣ: ಬೇರೆ ಜಾತಿ ವಿವಾಹಕ್ಕೆ ಕುಟುಂಬದ 40 ಜನರ ತಲೆ ಬೋಳಿಸಿಕೊಂಡ ಘಟನೆ!

ಬೆರ್ಹಂಪುರ್: ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾದ ಮಹಿಳೆಯ ಕುಟುಂಬದ 40 ಸದಸ್ಯರು ಶುದ್ಧೀಕರಣ ಆಚರಣೆಯ ಭಾಗವಾಗಿ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ.
ಬುಡಕಟ್ಟು ಸಮುದಾಯದ ಈ ಆಚರಣೆಯಲ್ಲಿ ಸ್ಥಳೀಯ ದೇವರ ಮುಂದೆ ಮೇಕೆ, ಕೋಳಿ ಮತ್ತು ಹಂದಿಗಳನ್ನು ಬಲಿಯನ್ನೂ ಸಹ ನೀಡಲಾಗಿದೆ ಎಂದು ವರದಿಯಾಗಿದೆ.
ರಾಯಗಡದ ಕಾಶಿಪುರ ಬ್ಲಾಕ್‌ನ ಗೋರಖ್‌ಪುರ ಪಂಚಾಯತ್ ವ್ಯಾಪ್ತಿಯ ಬೈಗನಗುಡ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದೆ.
ಮಹಿಳೆ ಎಸ್‌ಸಿ ಸಮುದಾಯದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು, ಅವರು ವಿವಾಹವಾಗಲು ನಿರ್ಧರಿಸಿದ್ದರು. ಆದಾಗ್ಯೂ, ಆ ವ್ಯಕ್ತಿ ಬುಡಕಟ್ಟು ಜನಾಂಗದವನಲ್ಲದ ಕಾರಣ ಅವರ ಕುಟುಂಬಗಳು ಮದುವೆಯನ್ನು ವಿರೋಧಿಸಿದ್ದವು. ವಿರೋಧದ ಹೊರತಾಗಿಯೂ, ಈ ಜೋಡಿ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.
ಆದರೆ ಮಹಿಳೆಯ ಕುಟುಂಬವು ಈ ಮದುವೆಯನ್ನು ನಿರಾಕರಿಸಿದ್ದು, ಅವರ ಪದ್ಧತಿಯ ಪ್ರಕಾರ, ಒಬ್ಬ ಮಹಿಳೆ ಬುಡಕಟ್ಟು ಜನಾಂಗದ ಹೊರಗೆ ಮದುವೆಯಾದರೆ, ಇಡೀ ಕುಟುಂಬವು ಗ್ರಾಮ ದೇವತೆಯ ಕೋಪವನ್ನು ಎದುರಿಸಬೇಕಾಗುತ್ತದೆ. ಸಂಪ್ರದಾಯವನ್ನು ಉಲ್ಲಂಘಿಸಿದರೆ, ಕುಟುಂಬ ಮತ್ತು ಅವರ ಸಂಬಂಧಿಕರು ಸಮುದಾಯದಲ್ಲಿ ಅಂಗೀಕರಿಸಲ್ಪಡುವ ಶುದ್ಧೀಕರಣ ಆಚರಣೆಗೆ ಒಳಗಾಗಬೇಕು.

ಅದರಂತೆ, ಆ ಮಹಿಳೆಯ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ತಮ್ಮ ತಲೆಗಳನ್ನು ಬೋಳಿಸಿಕೊಂಡು, ಮೇಕೆ, ಹಂದಿ ಮತ್ತು ಕೋಳಿಗಳನ್ನು ಬಲಿ ನೀಡಿದ ನಂತರ ಗ್ರಾಮಸ್ಥರಿಗೆ ಭೋಜನ ಕೂಟವನ್ನು ಏರ್ಪಡಿಸಿದ್ದಾರೆ.
ಗ್ರಾಮದಲ್ಲಿ ಯಾರೋ ಒಬ್ಬರು ಈ ಆಚರಣೆಯನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ವೀಡಿಯೊ ಕ್ಲಿಪ್ ವೈರಲ್ ಆಗುತ್ತಿದ್ದಂತೆ, ಜಿಲ್ಲಾಡಳಿತವು ಕಾಶಿಪುರದ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಅವರಿಗೆ ಘಟನೆಯ ತನಿಖೆ ನಡೆಸುವಂತೆ ನಿರ್ದೇಶಿಸಿದೆ.
ಬ್ಲಾಕ್ ಮಟ್ಟದ ವಿಸ್ತರಣಾ ಅಧಿಕಾರಿ ನೇತೃತ್ವದ ತಂಡವು ಈ ವಿಷಯದ ಬಗ್ಗೆ ತನಿಖೆ ನಡೆಸಲು ಬೈಗನಗುಡ ಗ್ರಾಮಕ್ಕೆ ಭೇಟಿ ನೀಡಿತು ಎಂದು ಬಿಡಿಒ ಬಿಜಯ್ ಸೋ ಹೇಳಿದರು.
“ತಂಡದ ಸದಸ್ಯರು ದಂಪತಿಗಳ ಕುಟುಂಬಗಳನ್ನು ಭೇಟಿಯಾದರು, ಅವರು ಯಾವುದೇ ಬಲವಂತವಿಲ್ಲದೆ ತಮ್ಮ ಪದ್ಧತಿಯ ಪ್ರಕಾರ ಆಚರಣೆಯನ್ನು ಆಚರಿಸಿದ್ದಾರೆ ಎಂದು ವಿವರಿಸಿದರು. ಅಂತರ್ಜಾತಿ ವಿವಾಹಕ್ಕೆ ಸರ್ಕಾರದ ಸಹಾಯವನ್ನು ಪರಿಗಣಿಸಲು ಈ ವಿಷಯವನ್ನು ಉನ್ನತ ಅಧಿಕಾರಿಗಳ ಮುಂದೆ ಇಡಲಾಗಿದೆ” ಎಂದು ಅವರು ಹೇಳಿದರು.