ಮರಕ್ಕೆ ಕೊಡಲಿ ಏಟು: ಮಗುವಿನಂತೆ ಸಾಕಿದ ಅಶ್ವತ್ಥ ಮರ ಕಡಿಯುತ್ತಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ 85 ವರ್ಷದ ವೃದ್ಧೆ

ಮನುಷ್ಯರೇ ಆಗಲಿ, ಮರ ಗಿಡ ಪ್ರಾಣಿ ಪಕ್ಷಿಗಳೇ ಆಗಲಿ, ನಾವು ಪ್ರೀತಿಯಿಂದ ಸಾಕಿ ಬೆಳೆಸಿದವರಿಗೆ ನಮ್ಮ ಕಣ್ಮುಂದೆ ಏನೇ ಆದರೂ ಸಹಿಸುವುದಕ್ಕೆ ಸ್ವಲ್ಪ ಕಷ್ಟ ಎನಿಸುತ್ತದೆ. ಅದೇ ರೀತಿ ಇಲ್ಲೊಬ್ಬರು ವೃದ್ಧ ಮಹಿಳೆ ತಾವು ಕಷ್ಟಪಟ್ಟು ಸಾಕಿ ಬೆಳೆಸಿದ ಬೃಹತ್ತಾದ ಆಲದ ಮರವನ್ನು ತಮ್ಮ ಮುಂದೆಯೇ ಕತ್ತರಿಸಿರುವುದನ್ನು ನೋಡಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಕತ್ತರಿಸಲ್ಪಟ್ಟಿರುವ ಅಶ್ವತ್ಥ ಮರದ ಬುಡಕ್ಕೆ ಪೂಜೆ ಮಾಡುವ ಮೂಲಕ ವೃದ್ಧ ಮಹಿಳೆ ಅದರ ಬುಡವನ್ನು ಹಿಡಿದುಕೊಂಡು ಕಣ್ಣೀರು ಹಾಕುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪ್ರಕೃತಿಯ ಜೊತೆ ವಯಸ್ಸಾದ ಮಹಿಳೆ ಹೊಂದಿದ್ದ ಅಮೂಲ್ಯ ಭಾಂದವ್ಯಕ್ಕೆ ಸಾಕ್ಷಿಯಾಗಿದೆ.

ಪ್ರೀತಿಯಿಂದ ಸಾಕಿ ಬೆಳೆಸಿದ ಮರಕ್ಕೆ ಕತ್ತರಿ: ಕಣ್ಣೀರಿಟ್ಟ ವೃದ್ಧ ಮಹಿಳೆ
ಅಂದಹಾಗೆ ಈ ಘಟನೆ ನಡೆದಿರುವುದು ಛತ್ತಿಸ್‌ಗಢದ ಖೈರಾಗರ್ ಜಿಲ್ಲೆಯ ಸಾರಾಗೊಂಡಿ ಗ್ರಾಮದಲ್ಲ. 20 ವರ್ಷಗಳಿಗೂ ಹೆಚ್ಚು ಕಾಲದ ಹಿಂದೆ ತಾನು ಪ್ರೀತಿಯಿಂದ ನೆಟ್ಟು ಪೋಷಿಸಿದ ಅಶ್ವತ್ಥ ಮರವನ್ನು ಕೆಲವು ವ್ಯಕ್ತಿಗಳು ಕಡಿದುಹಾಕಿದ ನಂತರ ವೃದ್ಧ ಮಹಿಳೆಯೊಬ್ಬರು ದುಃಖದಿಂದ ಗೋಳಾಡುತ್ತಿರುವ ದೃಶ್ಯ ವೈರಲ್ ಆಗಿದೆ. 85 ವರ್ಷದ ಡಿಯೋಲಾ ಬಾಯಿ ಎಂಬ ಮಹಿಳೆಯೇ ಮರ ಕಡಿದಿದ್ದಕ್ಕೆ ದುಃಖಿತರಾಗಿ ಅಳುತ್ತಿರುವ ವೃದ್ಧೆ. ಅವರು ಸುಮಾರು ಎರಡು ದಶಕಗಳ ಹಿಂದೆ ತಮ್ಮ ಅಂಗಳದಲ್ಲಿ ಒಂದು ಸಣ್ಣ ಅರಳಿ ಸಸಿಯನ್ನು ನೆಟ್ಟಿದ್ದರು. ಕಾಲ ಕಾಲಕ್ಕೆ ಅದಕ್ಕೆ ನೀರು ಹುಯ್ಯುತ್ತಾ ತನ್ನ ಸ್ವಂತ ಮಗುವಿನಂತೆ ಅವರು ರಕ್ಷಿಸಿದರು ಅವರ ಆರೈಕೆಯಲ್ಲಿ ಅರಳಿ ಮರ ಬೃಹತ್ ಮರವಾಗಿ ಬೆಳೆದಿತ್ತು ಎಂದು ಖೈರಾಗಢ ನಿವಾಸಿ ನರೇಂದ್ರ ಕುಮಾರ್ ಸೋನಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್
ಈ ಮರವನ್ನು ಹಣದಾಸೆಗಾಗಿ ಕಡಿದಿದ್ದಾರೆ ಎಂದು ವರದಿಯಾಗಿದೆ. ಆದರೆ ತಾನು ಪ್ರೀತಿಯಿಂದ ಸಲಹಿದ ಅರಳಿ ಮರವನ್ನು ಕೊಡಲಿಯಿಂದ ಕಡಿದ ನಂತರ ಮರ ಅಡ್ಡಬಿದ್ದಿದ್ದನ್ನು ನೋಡಿ ವೃದ್ಧೆ ಭಾವುಕರಾಗಿದ್ದಾರೆ. ಕತ್ತರಿಸಿದ ಮರದ ಪಕ್ಕದಲ್ಲಿ ಮಹಿಳೆ ಕುಳಿತು ಕಣ್ಣೀರು ಹಾಕುತ್ತಿದ್ದ ದೃಶ್ಯ ಅನೇಕರ ಕಣ್ಣಾಲಿಗಳನ್ನು ತೇವಗೊಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದ್ದು, ಅನೇಕರು ಮರವನ್ನು ಕಡಿದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
20 ವರ್ಷಗಳಿಂದ ಜನ ಪೂಜಿಸುತ್ತಿದ್ದ ಮರವನ್ನು ಕಡಿದ ಇಬ್ಬರ ಬಂಧನ
ಈ ಮರ ಸರ್ಕಾರಿ ಜಾಗದಲ್ಲಿ ಇತ್ತು ಎಂದು ವರದಿಯಾಗಿದ್ದು, ಈ ಅಶ್ವತ್ಥ ಮರವನ್ನು ಕಡಿದ ಆರೋಪದ ಮೇಲೆ ಖೈರಾಗಢ ಚುಯಿಖಾದನ್ ಗಂಡೈ (ಕೆಸಿಜಿ) ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಖೈರಾಗಢ ಎಸ್‌ಹೆಚ್‌ಒ ಅನಿಲ್ ಶರ್ಮಾ ಹೇಳಿದ್ದಾರೆ, ಸಾರಾ ಗೊಂಡಿ ಗ್ರಾಮಸ್ಥರು ಸುಮಾರು 20 ವರ್ಷಗಳಿಂದ ಇದನ್ನು ಪೂಜಿಸುತ್ತಿದ್ದರು ಎಂದು ಅವರು ಹೇಳಿದರು. ಸಾರಾಗೊಂಡಿ ಗ್ರಾಮದ ನಿವಾಸಿ ಪ್ರಮೋದ್ ಪಟೇಲ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಅಕ್ಟೋಬರ್ 5 ರ ಬೆಳಗ್ಗೆ ಖೈರಾಗಢ ನಿವಾಸಿ ಇಕ್ಬಾಲ್ ಮೆಮನ್ ಅವರ ಮಗ ಇಮ್ರಾನ್ ಮೆಮನ್ ಸಹಚರರನ್ನು ಕರೆತಂದು ಈ ಪೂಜನೀಯ ಮರವನ್ನು ಕಡಿಯಲು ಯತ್ನಿಸಿದರು ಆದರೆ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ ನಂತರ ಆ ಪ್ರಯತ್ನ ವಿಫಲವಾಯಿತು ಎಂದು ದೂರುದಾರರು ತಿಳಿಸಿದ್ದಾರೆ. ಆದರೆ ಇದಾದ ನಂತರ ಆಗ ವಾಪಸ್ ಹೋಗಿದ್ದ ಈ ಖದೀಮರ ತಂಡ ಅಕ್ಟೋಬರ್ 6 ಮುಂಜಾನೆ ಹೊತ್ತಿಗೆ ಮರಕ್ಕೆ ಕೊಡಲಿಯೇಟು ಹಾಕಿ ಬೀಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ
ಖೈರಾಗಢ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 298 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶಪೂರ್ವಕ ಉದ್ದೇಶ) ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ದಾಖಲಿಸಿದ ನಂತರ ಪೊಲೀಸರು ಆರೋಪಿ ಇಮ್ರಾನ್ ಮೆಮನ್‌ನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಆತ ತಾನು ಖರೀದಿಸಿದ ಜಮೀನಿನ ಮುಂದಿದ್ದ ಸರ್ಕಾರಿ ಭೂಮಿಯನ್ನು ನೆಲಸಮ ಮಾಡಲು ಬಯಸಿದ್ದಾಗಿ ಈ ಉದ್ದೇಶಕ್ಕಾಗಿ ಲಾಲ್‌ಪುರದ ಪ್ರಕಾಶ್ ಕೋಸ್ರೆ ಅವರ ಸಹಾಯದಿಂದ ಮರವನ್ನು ಕಡಿದು ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾನೆ ಎಂದು ವರದಿಯಾಗಿದೆ.
ತನಿಖೆ ವೇಳೆ ಕೊಸ್ರೆ ಮರವನ್ನು ಕತ್ತರಿಸುವ ಯಂತ್ರವನ್ನು ಬಳಸಿ ಮರವನ್ನು ಉರುಳಿಸಿದ್ದು, ಈ ಸಮಯದಲ್ಲಿ ಯಾರು ಹತ್ತಿರಕ್ಕೆ ಬಾರದಂತೆ ಮೆಮನ್ ರಸ್ತೆಯಲ್ಲಿ ನಿಂತು ಕಾವಲು ಕಾಯುತ್ತಿದ್ದ ಎಂದು ತಿಳಿದುಬಂದಿದೆ. ಘಟನೆಯ ನಂತರ, ಇಬ್ಬರೂ ಆರೋಪಿಗಳು ಖೈರಾಗಢಕ್ಕೆ ಹಿಂತಿರುಗಿದ್ದು, ಮರ ಕತ್ತರಿಸುವ ಯಂತ್ರವನ್ನು ನದಿಗೆ ಎಸೆದಿದ್ದಾರೆ ಎಂದು ಹೇಳಲಾಗಿದ್ದು, ಮುಳುಗುತಜ್ಞರು ಈಗ ಅದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾಗೆಯೇ ಈ ಪ್ರಕರಣಕ್ಕೆ ಹೆಚ್ಚುವರಿ ಸೆಕ್ಷನ್‌ಗಳಾದ 238 ಬಿಎನ್‌ಎಸ್ (ಕಿಡಿಗೇಡಿತನ) ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ತಡೆಗಟ್ಟುವಿಕೆ ಕಾಯ್ದೆಯ ಸೆಕ್ಷನ್ 3 ಸೇರಿಸಲಾಗಿದೆ. ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.