ಇನ್ಫೋಸಿಸ್ ವಿರುದ್ಧದ ಜಿಎಸ್‌ಟಿ ಆರೋಪದಲ್ಲಿ ಟ್ವಿಸ್ಟ್

ಬೆಂಗಳೂರು :ದೇಶದ 2ನೇ ಅತಿ ದೊಡ್ಡ ಐಟಿ ಸೇವಾ ಸಂಸ್ಥೆಯಾದ ಇನ್ಫೋಸಿಸ್‌ಗೆ ಕಳೆದ ವರ್ಷ ಆಗಸ್ಟ್ನಲ್ಲಿ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ 32,403 ಕೋಟಿ ರೂ. ಜಿಎಸ್‌ಟಿ ವಂಚನೆ ಆರೋಪ ಸಂಬಂಧ ನೋಟಿಸ್ ನೀಡಿತ್ತು.
ಇದೀಗ ಈ ಪ್ರಕರಣ ಸಂಬಂಧ, ನಿಯಾಮಾನುಸಾರ ವಿದೇಶಿ ಶಾಖೆಗಳಿಂದ ಭಾರತದ ಕಂಪನಿಗೆ ನೀಡಲಾದ ಸೇವೆಗಳು ಜಿಎಸ್‌ಟಿ ವ್ಯಾಪ್ತಿಗೆ ಬರಲ್ಲ ಎಂದು ಇನ್ಫೋಸಿಸ್ ವಿವರಣೆ ನೀಡಿದೆ.
ಈ ವಿವರಣೆಯನ್ನು ಆಲಿಸಿದ ಜಿಎಸ್‌ಟಿ ಮಹಾ ನಿರ್ದೇಶಕರು, ಇನ್ಫೋಸಿಸ್‌ಗೆ ನೀಡಿದ್ದ ಪೂರ್ವ ಶೋಕಾಸ್ ನೋಟಿಸ್ ಅನ್ನು ರದ್ದು ಮಾಡಿದೆ. ಈ ಮೂಲಕ ರೂ.32,403 ಕೋಟಿ ಜಿಎಸ್‌ಟಿ ಬಾಕಿ ಆರೋಪ ಪ್ರಕರಣದಲ್ಲಿ ಇನ್ಫೋಸಿಸ್‌ಗೆ ನಿರಾಳವಾಗಿದೆ.
2018-19 ರಿಂದ 2021-22 ರವರೆಗಿನ ಹಣಕಾಸು ವರ್ಷಗಳಲ್ಲಿ ಕಂಪನಿ ವಿರುದ್ಧದ ರೂ.32,403 ಕೋಟಿ ಸರಕು ಮತ್ತು ಸೇವಾ ತೆರಿಗೆ (GST) ಬಾಕಿ ವಿವಾದವನ್ನು ಅಧಿಕೃತವಾಗಿ ಮುಕ್ತಾಯಗೊಂಡಿದೆ ಎಂದು ಇನ್ಫೋಸಿಸ್ ಘೋಷಿಸಿದೆ.
ಜುಲೈ 2017 ಮತ್ತು ಮಾರ್ಚ್ 2022ರ ನಡುವೆ ಇನ್ಫೋಸಿಸ್ ತನ್ನ ವಿದೇಶಿ ಶಾಖೆಗಳಿಂದ ಪಡೆದ ಸೇವೆಗಳಿಂದ ತೆರಿಗೆ ಪ್ರಕರಣ ಉದ್ಭವಿಸಿತ್ತು. ಕಂಪನಿಯು ತನ್ನದೇ ಆದ ವಿದೇಶಿ ಶಾಖೆಗಳಿಂದ ಸೇವೆಗಳನ್ನು ಪರಿಣಾಮಕಾರಿಯಾಗಿ ಆಮದು ಮಾಡಿಕೊಂಡಿರುವುದರಿಂದ, ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ಇಂಟಿಗ್ರೇಟೆಡ್ GST (IGST) ಪಾವತಿಸಲು ಕಂಪನಿ ಹೊಣೆಗಾರನಾಗಿದೆ ಎಂದು ಈ ಹಿಂದೆ DGGI ವಾದಿಸಿತ್ತು. ಸದ್ಯ ಈ ವಿವಾದ ಸುಖಾಂತ್ಯಗೊಂಡಿದ್ದು, ಇನ್ಫೋಸಿಸ್ ಷೇರುಗಳು ಬೆಳವಣಿಗೆಗೆ ಸಕಾರಾತ್ಮಕವಾಗಿ ಎದುರಾಗುವ ನಿರೀಕ್ಷೆಯಿದೆ.