ಬೆಳಗಾವಿ: ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ ಹಿನ್ನೆಲೆಯಲ್ಲಿ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟರ್ ವರ್ಗಾವಣೆ

ಬೆಳಗಾವಿ: ಮರಾಠಿ ಮಾತನಾಡದೆ ಕನ್ನಡ ಮಾತನಾಡಿದ್ದಕ್ಕೆ ಕೆಎಸ್ಆರ್ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಮರಾಠಿ ದುರುಳರು ನಿರ್ವಾಹಕನ ವಿರುದ್ಧ ಪಿತೂರಿ ಮಾಡಿ ಆವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದರು. ಈ ಪ್ರಕರಣದ ವಿರುದ್ಧ ಕನ್ನಡ ಪರ ಸಂಘಟನೆಗಳು ಬೀದಿಗೆ ಬಂದು ಹೋರಾಟ ನಡೆಸುತ್ತಿವೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಂಡಕ್ಟರ್ ಬೆನ್ನಿಗೆ ನಿಂತಿದ್ದಾರೆ.


ಇದೀಗ ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿಕೊಂಡಿದ್ದ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟರ್ ಅವರ ತಲೆದಂಡವಾಗಿದೆ. ಹೌದು, ಮಾರಿಹಾಳ ಠಾಣೆಯಿಂದ ಬೆಳಗಾವಿಯ ಸಿಸಿಆರ್‌ಬಿಗೆ ಗುರುರಾಜ್ ಅವರನ್ನು ವರ್ಗಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆದೇಶ ಹೊರಡಿಸಿದ್ದಾರೆ. ಸಧ್ಯ ಮಾರಿಹಾಳ ಠಾಣೆಯ ನೂತನ ಸಿಪಿಐ ಆಗಿ ಮಂಜುನಾಥ ನಾಯಕ ಅವರನ್ನು ನೇಮಕ ಮಾಡಲಾಗಿದೆ.