ರೈಲು ಅಪಘಾತದಲ್ಲಿ ಸಾವು: ಕುಟುಂಬಕ್ಕೆ 8 ಲಕ್ಷ ಪರಿಹಾರ ನೀಡಲು ಗ್ರಾಹಕರ ಆಯೋಗ ತೀರ್ಪು

ಧಾರವಾಡ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗ ಹುಬ್ಬಳ್ಳಿ ವಿಭಾಗದ ನೈಋತ್ಯ ರೈಲ್ವೆಗೆ ಆದೇಶಿಸಿದೆ. ದೂರುದಾರರಿಗೆ 1 ತಿಂಗಳೊಳಗೆ 8 ಲಕ್ಷ ರೂ. ಪಾವತಿಸಬೇಕು. ಜತೆಗೆ ಪ್ರಕರಣದ ವೆಚ್ಚ 10 ಸಾವಿರ ರೂ. ಕೊಡಬೇಕು ಎಂದು ನೈಋತ್ಯ ರೈಲ್ವೆಗೆ ನಿರ್ದೇಶಿಸಿ ತೀರ್ಪು ನೀಡಲಾಗಿದೆ.

ನಡೆದದ್ದೇನು?
ಹುಬ್ಬಳ್ಳಿಯ ಕೇಶವ ನಗರ ನಿವಾಸಿ ಕೀರ್ತಿವತಿ ಎಂಬುವರು ಪತಿ ಸುಧೀಂದ್ರ ಕುಲಕರ್ಣಿ ಅವರೊಂದಿಗೆ 2023ರ ಫೆಬ್ರುವರಿ 4ರಂದು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ರಾತ್ರಿ ಸುಧೀಂದ್ರ ಅವರು ರೈಲಿನಲ್ಲಿದ್ದ ಶೌಚಗೃಹಕ್ಕೆ ಹೋದಾಗ ಬೋಗಿಯ ಬಾಗಿಲು ತೆರೆದಿದ್ದ ಕಾರಣ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದರು.
ರಿಸರ್ವ್ ಕ್ಲಾಸ್‌ಗೆ ಹಣ ಪಡೆದು ಬೋಗಿಯಲ್ಲಿ ಟಿಟಿಇ, ಗಾರ್ಡ್ ಇರದೇ, ಬಾಗಿಲನ್ನು ಮುಚ್ಚದಿರುವ ಕಾರಣ ಅವಘಡ ನಡೆದಿದೆ ಎಂದು ದೂರುದಾರರು ಪ್ರಕರಣ ದಾಖಲಿಸಿದ್ದರು. ಆದರೆ, ದುರ್ಘಟನೆಯಿಂದ ಮೃತಪಟ್ಟರೆ ಇಲಾಖೆಯಿಂದ 8 ಲಕ್ಷ ರೂ. ಪಡೆಯಲು ರೈಲ್ವೆ ಟ್ರಿಬ್ಯುನಲ್‌ನಲ್ಲಿ ದಾವೆ ಹೂಡಬೇಕು. ಗ್ರಾಹಕರ ಆಯೋಗದಲ್ಲಿ ವಿಮೆ ಕೇಳಲು ಅರ್ಹರಲ್ಲ ಎಂದು ಇಲಾಖೆ ನಿರಾಕರಿಸಿತ್ತು. ಇದರಿಂದ ನೊಂದ ಕೀರ್ತಿವತಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.
ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ವಿಚಾರಣೆ ನಡೆಸಿ, ವಿಮಾ ಹಣವನ್ನು ರೈಲ್ವೆ ಟ್ರಿಬ್ಯುನಲ್‌ನಲ್ಲಿ ಪಡೆಯಬೇಕು. ಆಯೋಗದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಕ್ಲೀಮ್ ನಿರಾಕರಿಸಿರುವುದು ಸರಿಯಲ್ಲ. ಪ್ರಕರಣ ಗ್ರಾಹಕರ ಪರಿಹಾರ ಆಯೋಗದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ಪರಿಹಾರ ನೀಡುವಂತೆ ನೈಋತ್ಯ ರೈಲ್ವೆಗೆ ನಿರ್ದೇಶಿಸಿ ತೀರ್ಪು ನೀಡಿದ್ದಾರೆ.
