ಬೇಟೆ ವೇಳೆ ಆಕಸ್ಮಿಕ ಗುಂಡು ಸಿಡಿದ ಘಟನೆ: 27 ವರ್ಷದ ಯುವಕ ಸಾವನ್ನಪ್ಪಿದ ದುರಂತ

ಶಿವಮೊಗ್ಗ : ಬೇಟೆಗೆ ಎಂದು ತೆರಳಿದ್ದಾಗ ಕೈಯಲ್ಲಿದ್ದ ಗುಂಡು ಆಕಸ್ಮಿಕವಾಗಿ ಸಿಡಿದಿದ್ದರಿಂದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟ್ಟೇಹಕ್ಕಲು ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಬಸವಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಾರ ಮಜರೆ ಗ್ರಾಮದ ಗೌತಮ್ ಕೆ.ವಿ. (27) ಎಂದು ತಿಳಿದುಬಂದಿದೆ.
ತಡರಾತ್ರಿ ನಾಲ್ವರು ಸ್ನೇಹಿತರೊಂದಿಗೆ ಗೌತಮ್ ಕಾರಿನಲ್ಲಿ ತೆರಳಿದ್ದ. ವಾಹನವನ್ನು ದಾರಿ ಮಧ್ಯೆ ನಿಲ್ಲಿಸಿ ಉಳಿದ ಸ್ನೇಹಿತರನ್ನು ಅಲ್ಲಿಯೇ ಬಿಟ್ಟು ಬಂದೂಕು ಹಿಡಿದುಕೊಂಡು ಸಮೀಪದ ಗುಡ್ಡ ಏರಿದ್ದಾನೆ.
ಬಂದೂಕಿನ ಟ್ರಿಗರ್ ಎಳೆದು ಗುಡ್ಡ ಹತ್ತುವಾಗ ಕಾಲು ಜಾರಿ ಕೆಳಗೆ ಬಿದ್ದ ವೇಳೆ ಬಂದೂಕಿನಿಂದ ಗುಂಡು ಸಿಡಿದು ಕುತ್ತಿಗೆ ಮೂಲಕ ಮುಖವನ್ನು ಸೀಳಿಕೊಂಡು ಹೋಗಿ ಮೃತಪಟ್ಟಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.