ಬಹಳ ಹೊತ್ತಾದರೂ ಹೊರಬಾರದ ಕಾರಣ ಬಾಗಿಲು ಒಡೆದು ನೋಡಿದ ತಂದೆಗೆ ಕಾದಿತ್ತು ದುರಂತ

ಬೆಂಗಳೂರು: ಬೆಂಗಳೂರು ಮತ್ತು ಮೈಸೂರಿನ (Mysuru) ಪಿರಿಯಾಪಟ್ಟಣದಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟ ಮತ್ತು ಗ್ಯಾಸ್ ಗೀಸರ್ ಸೋರಿಕೆ ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣದಲ್ಲಿ ಜತೆಯಾಗಿ ಸ್ನಾನಕ್ಕೆ ಹೋಗಿದ್ದ ಇಬ್ಬರು ಯುವತಿಯರು ಸಾವನ್ನಪ್ಪಿದ್ದು, ಬೆಂಗಳೂರಿನ ಕೆಆರ್ ಪುರಂನಲ್ಲಿ ವ್ಯಕ್ತಿಯೊಬ್ಬರು ಅಸುನೀಗಿದ್ದಾರೆ.

ಕೆಆರ್ ಪುರಂ ತ್ರಿವೇಣಿನಗರದಲ್ಲಿ ಸಿಲಿಂಡರ್ ಸ್ಫೋಟ
ಬೆಂಗಳೂರಿನ ಕೆ.ಆರ್.ಪುರಂ ತ್ರಿವೇಣಿನಗರದ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಿಲ ಸೋರಿಕೆಯಿಂದಾಗಿ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಸ್ಫೋಟದ ರಭಸಕ್ಕೆ ಪಕ್ಕದ ಮನೆಗಳಿಗೂ ಹಾನಿಯಾಗಿದೆ. ಈ ಕುರಿತು ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗ್ಯಾಸ್ ಗೀಸರ್ ಸೋರಿಕೆ: ಯುವತಿಯರು ಸಾವು
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಇಬ್ಬರು ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಗುಲ್ಫಾರ್ಮ್ (23) ಮತ್ತು ಸಿಮ್ರಾನ್ ತಾಜ್ (20) ಎಂದು ಗುರುತಿಸಲಾಗಿದೆ. ಇಬ್ಬರೂ ಸ್ನಾನ ಮಾಡಲು ಬಾತ್ರೂಮ್ ಒಳಗೆ ತೆರಳಿದ್ದವರು ಬಹಳ ಹೊತ್ತಾದರೂ ಹೊರಬಂದಿರಲಿಲ್ಲ. ಹೀಗಾಗಿ ಅವರ ತಂದೆ ಅಲ್ತಾಫ್ ಬಾಗಿಲು ಒಡೆದು ನೋಡಿದ್ದಾರೆ. ಆಗ ಇಬ್ಬರೂ ಅರೆಪ್ರಜ್ಞಾವಸ್ಥೆಯಲ್ಲಿ ಇರುವುದು ಕಾಣಿಸಿದೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇಬ್ಬರೂ ಮೃತಪಟ್ಟಿದ್ದಾರೆ.