ದುರಂತ: ನಾಪತ್ತೆಯಾಗಿದ್ದ ಸುಖೋಯ್-30 ಯುದ್ಧವಿಮಾನ ಪತನ; ಇಬ್ಬರು ಪೈಲಟ್ಗಳ ಸುಳಿವಿಲ್ಲ

ಗುವಾಹತಿ: ಅಸ್ಸಾಂನ ಜೋರ್ಹಟ್ ನಿಂದ ಗುರುವಾರ ಸಂಜೆ ಟೇಕಾಫ್ ಆಗಿ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿದುಕೊಂಡಿದ್ದ ಸುಖೋಯ್-30 ಯುದ್ಧವಿಮಾನ ಕರ್ಬಿ ಅಗ್ಲಾಂಗ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಭಾರತೀಯ ವಾಯುಪಡೆ ಪ್ರಕಟಿಸಿದೆ. ಜೋರ್ಹಟ್ ನಿಂದ 60 ಕಿಲೋಮೀಟರ್ ದೂರದಲ್ಲಿ ತರಬೇತಿ ನೀಡುತ್ತಿದ್ದ ಯುದ್ಧವಿಮಾನ ಪತಗೊಂಡಿದ್ದು, ಇಬ್ಬರು ಪೈಲಟ್ ಗಳ ಸುಳಿವು ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಸ್ಸಾಂನ ವಾಯುನೆಲೆಯಿಂದ ಟೇಕಾಫ್ ಆದ ಬಳಿಕ ಸುಖೋಯ್-30 ಎಂಕೆಐ ಯುದ್ಧವಿಮಾನ ಗುರುವಾರ ರಾತ್ರಿ ಸಂಪರ್ಕ ಕಡಿದುಕೊಂಡಿತ್ತು. ವ್ಯಾಪಕ ಶೋಧ ಕಾರ್ಯಾಚರಣೆ ಹಾಗೂ ಇಬ್ಬರು ಪೈಲಟ್ ಗಳ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ರಾತ್ರಿ 7.42ರವರೆಗೂ ರಾಡಾರ್ ಸಂಪರ್ಕದಲ್ಲಿತ್ತು ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.
ಏತನ್ಮಧ್ಯೆ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ನಿಲೀಪ್ ಬ್ಲಾಕ್ ಸಮೀಪದ ಬೆಟ್ಟಪ್ರದೇಶದಲ್ಲಿ ರಾತ್ರಿ 7 ಗಂಟೆಯ ಸುಮಾರಿಗೆ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ ಎನ್ನಲಾಗಿದೆ. ಭಾರತೀಯ ವಾಯುಪಡೆ 260 ಸುಖೋಯ್-30ಎಂಕೆಐ ಯುದ್ಧ ವಿಮಾನಗಳನ್ನು ಹೊಂದಿದ್ದು, ಒಂದು ವಿಮಾನ 2024ರ ಜೂನ್ ನಲ್ಲಿ ಮಹಾರಾಷ್ಟ್ರದ ನಾಸಿಕ್ ನಲ್ಲಿ ಅಪಘಾತಕ್ಕೀಡಾಗಿತ್ತು. 2023ರ ಜನವರಿಯಲ್ಲಿ ಮತ್ತೊಂದು ವಿಮಾನ ಗ್ವಾಲಿಯರ್ ವಾಯುನೆಲೆಯಿಂದ ಟೇಕಾಫ್ ಆದ ಬಳಿಕ ಪತನಗೊಂಡಿತ್ತು.
