ಪೂಲ್ ಪಾರ್ಟಿಯ ಮಧ್ಯೆ ದುರಂತ: 24ರ ಯುವಕ ಶಿಖರ್ ಸಿಂಗ್ ನೀರಿನಲ್ಲಿ ಮುಳುಗಿ ಸಾವು

ಕಾನ್ಪುರ : ಸಾವು ಹೇಗೆ ಯಾವಾಗ ಹೇಗೆ ಬರುತ್ತದೆ ಎಂದು ಊಹಿಸಲು ಅಸಾಧ್ಯ. ಕೆಲವೊಮ್ಮೆ ಸುಳಿವೇ ನೀಡದಂತೆ ಸಾವು ಬಂದು ಬಿಡುತ್ತದೆ. ಇದೀಗ ಇಂತಹದ್ದೇ ಆಘಾತಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಸಾನಿಗ್ವಾನ್‌ನಲ್ಲಿರುವ ರೆಸಾರ್ಟ್‌ನಲ್ಲಿ ಜೋರಾದ ಸಂಗೀತದೊಂದಿಗೆ ಪೂಲ್ ಪಾರ್ಟಿ ನಡೆಯುತ್ತಿತ್ತು. ಪಾರ್ಟಿಯಲ್ಲಿ ಭಾಗಿಯಾಗಿ ಈಜುಕೊಳದಲ್ಲಿ ತನ್ನ ಸ್ನೇಹಿತರೊಂದಿಗೆ ಈಜಾಡುತ್ತಿದ್ದ ಯುವಕನೊಬ್ಬನು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಘಟನೆಯೂ ಉತ್ತರಪ್ರದೇಶ ಕಾನ್ಪುರದಲ್ಲಿ ನಡೆದಿದೆ ಎನ್ನಲಾಗಿದೆ. ಮೃತ ಯುವಕನನ್ನು 24 ವರ್ಷದ ಶಿಖರ್ ಸಿಂಗ್ ಎಂದು ಗುರುತಿಸಲಾಗಿದೆ. ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಈ ದೃಶ್ಯವು ಸೆರೆಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


DeepikaBhardwaj ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಯುವಕರು ಈಜುಕೊಳದಲ್ಲಿ ಈಜುತ್ತಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಯುವಕನೊಬ್ಬನು ನೀರಿನಲ್ಲಿ ಮುಳುಗುತ್ತಿದ್ದು, ಡಿಜೆಯ ಸೌಂಡ್ ನಿಂದಾಗಿ ಅಲ್ಲೇ ಇದ್ದ ಸ್ನೇಹಿತರಿಗೆ ಈ ಬಗ್ಗೆ ತಿಳಿಯುವುದೇ ಇಲ್ಲ. ನೀರಿನಲ್ಲಿ ಮುಳುಗುತ್ತಿದ್ದಂತೆ ತನ್ನ ಎರಡು ಕೈಗಳನ್ನು ಮೇಲಕ್ಕೆ ಎತ್ತುವುದನ್ನು ಕಾಣಬಹುದು. ಅಷ್ಟೇ ಅಲ್ಲದೇ, ಆ ಬಳಿಕ ತನ್ನ ಎರಡು ಕಾಲುಗಳನ್ನು ಮೇಲಕ್ಕೆ ಎತ್ತುತ್ತಾನೆ. ಕೊನೆಗೆ ಕೈ ಕಾಲುಗಳನ್ನು ಮೇಲಕ್ಕೆ ಎತ್ತಿ, ಮೇಲೆ ಬರಲು ಪ್ರಯತ್ನಿಸುತ್ತಾನೆ. ಆದರೆ ಮೇಲೆ ಬರಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಸ್ನೇಹಿತರಿಗೆ ಈ ಬಗ್ಗೆ ತಿಳಿಯುತ್ತಿದ್ದಂತೆ ಯುವಕನನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಆದಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಚಾಕೇರಿ ಪೊಲೀಸ್ ಠಾಣಾ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಶಿಖರ್ ಸಿಂಗ್ ಯಶೋದಾ ನಗರ ನಿವಾಸಿ ಶೈಲೇಂದ್ರ ಸಿಂಗ್ ಅವರ ಏಕೈಕ ಪುತ್ರ. ಕಳೆದ ಕೆಲವು ಸಮಯದ ಹಿಂದೆ ಪುರಸಭೆಯಲ್ಲಿ ಗುತ್ತಿಗೆ ಕೆಲಸಗಾರನಾಗಿ ಸೇರಿದ್ದನು. ಸ್ನೇಹಿತರೊಂದಿಗೆ ವಾಟರ್ ಪಾರ್ಕ್‌ನ ಹೋಗಿದ್ದ ವೇಳೆಯಲ್ಲಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಮಗನನ್ನು ಕಳೆದುಕೊಂಡ ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಜೂನ್ 24 ರಂದು ಶೇರ್ ಮಾಡಲಾದ ಈ ಪೋಸ್ಟ್ ಹಲವಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಇದು ಅಷ್ಟೇನು ಆಳವಿಲ್ಲದ ಕೊಳ, ಅವನು ಅಲ್ಲಿ ಎದ್ದು ನಿಲ್ಲಬಹುದಿತ್ತು, ಈ ಘಟನೆ ಹೇಗೆ ಸಂಭವಿಸಿತು ಎಂದು ಊಹಿಸಲು ಅಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ಇದು ದುರಂತ, ಹತ್ತಿರ ಅಷ್ಟು ಸ್ನೇಹಿತರಿದ್ದರೂ ಇದನ್ನು ಗಮನಿಸಲೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಯಾರು ಕೂಡ ಅವನತ್ತ ನೋಡುತ್ತಿಲ್ಲ, ಎಂತ ವಿಪರ್ಯಾಸ ಎಂದಿದ್ದಾರೆ.