ಸರಿಯಾದ ಸಮಯಕ್ಕೆ ದಂಪತಿಯ ಜೀವ ರಕ್ಷಣೆ ಮಾಡಿದ ಟ್ರಾಫಿಕ್ ಪೊಲೀಸ್

ಸಾಮಾನ್ಯವಾಗಿ ಟ್ರಾಫಿಕ್ ಪೊಲೀಸರು ವಾಹನ ಅಡ್ಡ ಹಾಕಿದರೆಂದರೆ ಸುಲಿಗೆಗಿಳಿದರು ಎಂದೇ ಬಹುತೇಕರ ಸವಾರರು ನಂಬುತ್ತಾರೆ. ಹೀಗಾಗಿ ಟ್ರಾಫಿಕ್ ಪೊಲೀಸರ ಕೈನಿಂದ ತಪ್ಪಿಸಿಕೊಳ್ಳುವುದಕ್ಕೆ ಹೋಗಿ ವೇಗವಾಗಿ ಪ್ರಯಾಣಿಸಲು ಹೋಗಿ ಜೀವ ಕಳೆದುಕೊಂಡ ಅನೇಕರು ಇದ್ದಾರೆ. ಆದರೆ ಎಲ್ಲಾ ಪೊಲೀಸರು ಹಾಗಿರಲ್ಲ.

ನಿಷ್ಠೆಯಿಂದ ಕೆಲಸ ಮಾಡುವ ಸಾಕಷ್ಟು ಪೊಲೀಸರು ಇದ್ದಾರೆ. ಅದೇ ರೀತಿ ಇಲ್ಲೊಂದು ಕಡೆ ಪೊಲೀಸರೊಬ್ಬರು ನೀಡಿದ ಸಲಹೆಯೊಂದು ದಂಪತಿಗೆ ಮರುಜೀವ ನೀಡಿದೆ ಎಂದರು ತಪ್ಪಾಗಲಾರದು ಸ್ವತಃ ದಂಪತಿಯೇ ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈಗ ವೈರಲ್ ಆಗಿದೆ.
ಪಕ್ಕಕ್ಕೆ ಕಾರು ನಿಲ್ಲಿಸಲು ಹೇಳಿದ ಟ್ರಾಫಿಕ್ ಪೊಲೀಸ್ ಹೇಳಿದ್ದೇನು?
ದಂಪತಿಯೊಬ್ಬರು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಸೀಟು ಬೆಲ್ಟ್ ಹಾಕದಿರುವುದನ್ನು ಗಮನಿಸಿ ಕಾರು ನಿಲ್ಲಿಸಲು ಹೇಳಿದ ಟ್ರಾಫಿಕ್ ಪೊಲೀಸ್ ಅವರ ಕಾರಿನಲ್ಲಿದ್ದ ಚಾಲಕನ ಪತ್ನಿಗೆ ಸೀಟು ಬೆಲ್ಟ್ ಹಾಕುವಂತೆ ಸಮಾಧಾನದಿಂದ ಹೇಳಿದ್ದಾರೆ. ಅದರಂತೆ ದಂಪತಿ ಸೀಟು ಬೆಲ್ಟ್ ಹಾಕಿ ಮುಂದೆ ಹೋಗಿದ್ದು, ಕೇವಲ ಹದಿನೈದೇ ನಿಮಿಷದಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರು ದೊಡ್ಡ ಅಪಘಾತಕ್ಕೀಡಾಗಿದ್ದು, ಸೀಟು ಬೆಲ್ಟ್ ಧರಿಸಿದ್ದ ಕಾರಣಕ್ಕೆ ಅವರ ಜೀವ ಉಳಿದಿದೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಮುಂಬೈನ ಗೌತಮ್ ವಿಜಯ್ ರೊಹ್ರಾ ಎಂಬುವವರು ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ ನೋಡಿ. ಜುಲೈ 26ರಂದು ಶನಿವಾರ ನಾನು ಹಾಗೂ ನನ್ನ ಪತ್ನಿ ಭಾರಿ ಮಳೆಯ ಮಧ್ಯೆಯೇ ಕಾರಿನಲ್ಲಿ ಮನೆಗೆ ಬರುತ್ತಿದ್ದೆವು. ಟ್ರಾಫಿಕ್ ಅಧಿಕಾರಿಯೊಬ್ಬರು ನಮ್ಮನ್ನು ನಿಲ್ಲಿಸಿದರು. ಹಾಗೂ ಕಾರನ್ನು ಪಕ್ಕಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಿ ಇಲ್ಲದಿದ್ದರೆ ನೀವಿಬ್ಬರು ಒದ್ದೆಯಾಗುತ್ತಿರಿ ಎಂದು ಅವರು ಹೇಳಿದರು.
ನಂತರ ನಿಮ್ಮ ಪತ್ನಿ ಸೀಟ್‌ಬೆಲ್ಟ್ ಧರಿಸಿಲ್ಲಇದಕ್ಕೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಆದರೆ ಇದು ಹಣದ ವಿಚಾರವಲ್ಲ, ಆದರೆ ಅಪಘಾತಗಳಾದಂತಹ ಸಂದರ್ಭದಲ್ಲಿ ಸೀಟ್ ಬೆಲ್ಟ್ ನಿಮ್ಮ ಜೀವ ಉಳಿಸುತ್ತದೆ. ಹೀಗಾಗಿ ಸೀಟ್ ಬೆಲ್ಟ್ ಧರಿಸದೇ ಮುಂದುವರೆಯಬೇಡಿ ಎಂದು ಆ ಪೊಲೀಸ್ ಅಧಿಕಾರಿ ಹೇಳಿದರು.
ಕೇವಲ 15 ನಿಮಿಷದಲ್ಲಿ ನಡೆದಿತ್ತು ಅಪಘಾತ:
ನಾವು ಆ ಅಧಿಕಾರಿಗೆ ಧನ್ಯವಾದ ಹೇಳಿ ಮುಂದೆ ಹೋದೆವು. ನಾವು ಅಲ್ಲಿಂದ ಹೊರಟು ಬಂದು 15 ನಿಮಿಷವೂ ಕಳೆದಿರಲ್ಲಿಲ್ಲ. ನಾವು ಅಂಧೇರಿ ಫ್ಲೈಓವರ್‌ನಿಂದ ಇಳಿಯುತ್ತಿದ್ದಂತೆ ದೊಡ್ಡ ಅಪಘಾತಕ್ಕೆ ತುತ್ತಾದೆವು. ಕಾರು ಎರಡು ಬಾರಿ ಪಲ್ಟಿ ಹೊಡೆದಿತ್ತು. ನಮಗೆ ಭಯಾನಕ ಅನುಭವವಾಗಿತ್ತು. ಆದರೆ ನಾವು ಇಬ್ಬರೂ ಬದುಕುಳಿದೆವು. ನನಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆದರೆ ನನ್ನ ಪತ್ನಿಗೆ ಸಣ್ಣ ಗೀರು ಕೂಡ ಆಗಿರಲಿಲ್ಲ,
ಇದನ್ನು ನೋಡಿ ವೈದ್ಯರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು. ನಿಜವಾಗಿಯೂ ಆ ಟ್ರಾಫಿಕ್ ಪೊಲೀಸ್ ನಮ್ಮ ಪಾಲಿಗೆ ದೇವರಾಗಿದ್ದರು. ಅವರ ಸಮರ್ಪಕ ಕರ್ತವ್ಯ ಹಾಗೂ ಸಲಹೆಯಿಂದ ನಾವು ಇಂದು ಬದುಕುಳಿದಿದ್ದೇವೆ. ಇಂತಹ ಪರಿಸ್ಥಿತಿಗಳು ನಮ್ಮ ಮೂಕ ರಕ್ಷಕ್ಷರು ಎಲ್ಲಾ ಕಡೆ ಇರುತ್ತಾರೆ ಎಂಬುದು.
ಟ್ರಾಫಿಕ್ ಪೊಲೀಸ್ ಪ್ರವೀಣ್ ಕ್ಷಿರ್‌ಸಾಗರ್ ಕಾರ್ಯಕ್ಕೆ ಶ್ಲಾಘನೆ:
ಅಂದಹಾಗೆ ನಮಗೆ ಸೀಟ್ ಬೆಲ್ಟ್ ಹಾಕುವಂತೆ ಜಾಗೃತಿ ಮೂಡಿಸಿದವರು ಬಿಕೆಸಿ ಟ್ರಾಫಿಕ್ ವಿಭಾಗದ ಪೊಲೀಸ್ ಆಗಿರುವ ಪ್ರವೀಣ್ ಕ್ಷಿರ್‌ಸಾಗರ್ ಅವರ ಸಲಹೆ ನಮ್ಮ ಜೀವನ ರಕ್ಷಿಸಿತ್ತು. ಇದನ್ನು ನಾನು ಏಕೆ ಹಂಚಿಕೊಳ್ಳುತ್ತೇನೆ ಎಂದರೆ ಟ್ರಾಫಿಕ್ ಪೊಲೀಸರು ಕೇವಲ ದಂಡ ಹಾಕುವುದಕ್ಕೆ ವಾಹನವನ್ನು ನಿಲ್ಲಿಸುವುದಿಲ್ಲ, ಅವರು ನಮ್ಮ ತಪ್ಪುಗಳನ್ನು ಹೇಳಿದಾಗ ಸಿಟ್ಟು ಮಾಡಿಕೊಳ್ಳಬೇಡಿ. ನಮ್ಮನ್ನು ಸುರಕ್ಷಿತವಾಗಿಟ್ಟುಕೊಳ್ಳುವುದಕ್ಕೆ ಸರ್ಕಾರ ಕೆಲ ನಿಯಮಗಳನ್ನು ಜಾರಿಗೆ ತಂದಿದೆ.
ಪ್ರತಿ ಕಷ್ಟದ ಸಮಯದಲ್ಲೂ ಮಾನವೀಯತೆ ಬಹಿರಂಗವಾಗುತ್ತದೆ. ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನನ್ನ ಧನ್ಯವಾದಗಳು. ಹಾಗೆಯೇ ನನಗೆ ಜೀವಿಸಲು 2ನೇ ಅವಕಾಶ ನೀಡಿದ ಪೊಲೀಸ್ ಅಧಿಕಾರಿಗೆ ನಾನು ಋಣಿಯಾಗಿರುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
