ಹಾ ಲಾಂಗ್ ಕೊಲ್ಲಿಯಲ್ಲಿ ಪ್ರವಾಸಿ ಹಡಗು ಪಲ್ಟಿ

ಹನೋಯ್: ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ 53 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರವಾಸಿ ಹಡಗು ಮಗುಚಿ ಬಿದ್ದ ಪರಿಣಾಮ, ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಹಡಗಿನಲ್ಲಿ 48 ಪ್ರವಾಸಿಗರ ಜೊತೆ ಮಕ್ಕಳು ಹಾಗೂ ಐದು ಜನ ಸಿಬ್ಬಂದಿ ಇದ್ದರು ಎನ್ನಲಾಗಿದ್ದು, ಬಲವಾದ ಗಾಳಿ ಬೀಸಿದ ಪರಿಣಾಮ ಹಡಗು ಮಗುಚಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಂಡರ್ ಸೀ ಕ್ರೂಸ್ ದೋಣಿ ಸ್ಥಳೀಯ ಸಮಯ ಸುಮಾರು ಮಧ್ಯಾಹ್ನ 1:45 ಕ್ಕೆ ಪ್ರಸಿದ್ಧ ಡೌ ಗೋ ಗುಹೆಯ ಬಳಿ ಪಲ್ಟಿಯಾಗಿದೆ ಎಂದು ಕ್ವಾಂಗ್ ನಿನ್ಹ್‌ನಲ್ಲಿರುವ ಪ್ರಾಂತೀಯ ಅಧಿಕಾರಿಗಳ ತಿಳಿಸಿದ್ದಾರೆ.
ಇಲ್ಲಿಯವರೆಗೆ 11 ರಿಂದ 12 ಜನರನ್ನು ರಕ್ಷಣೆ ಮಾಡಲಾಗಿದ್ದು, ಸದ್ಯ ರಕ್ಷಣಾ ಕಾರ್ಯ ಮುಂದುವರೆದಿದೆ. ಹದಗೆಡುತ್ತಿರುವ ಹವಾಮಾನದ ನಡುವೆಯೂ ಬದುಕುಳಿದವರನ್ನು ಪತ್ತೆ ಹಚ್ಚಲು ರಕ್ಷಣಾ ತಂಡಗಳು ತಮ್ಮ ಕಾರ್ಯಾಚರಣೆಯನ್ನು ತುರ್ತಾಗಿ ಮುಂದುವರಿಸಿವೆ. ರಾಷ್ಟ್ರೀಯ ರಕ್ಷಣಾ ಸಚಿವಾಲಯ ಮತ್ತು ಸಾರ್ವಜನಿಕ ಭದ್ರತಾ ಸಚಿವಾಲಯಕ್ಕೆ ತಕ್ಷಣವೇ ಪೂರ್ಣ ಪ್ರಮಾಣದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಆದೇಶ ಹೊರಡಿಸಿದ್ದಾರೆ.
ವಿಯೆಟ್ನಾಂ ಹವಾಮಾನ ಇಲಾಖೆಯು ಉಷ್ಣವಲಯದ ಚಂಡಮಾರುತದ ಎಚ್ಚರಿಕೆಯನ್ನು ನೀಡಿದೆ. ಮುಂದಿನ ವಾರ ಹಾ ಲಾಂಗ್ ಬೇ ಕರಾವಳಿ ಸೇರಿದಂತೆ ಉತ್ತರ ವಿಯೆಟ್ನಾಂಗೆ ಟೈಫೂನ್ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗಾಗಿ ಪ್ರವಾಸಿಗರು ಸೇರಿದಂತೆ ಎಲ್ಲರೂ ಅಂತಹ ಸಮಯದಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ.
