ಮನೆ ಮಗನಂತಿದ್ದ ಶ್ವಾನಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ: ಮೃತಪಟ್ಟ ‘ಬಾಕ್ಸಿ’ ನೆನಪಿನಲ್ಲಿ ಭವ್ಯ ಸಮಾಧಿ ನಿರ್ಮಿಸಿದ ವೈದ್ಯ ಕುಟುಂಬ

ಚಿತ್ತೂರು : ನಿಷ್ಠೆಗೆ ಇನ್ನೊಂದು ಹೆಸರೇ ನಾಯಿ ಎಂಬ ಮಾತನ್ನು ಅಕ್ಷರಶಃ ನಿಜವಾಗಿಸಿರುವ ಘಟನೆಯೊಂದು ಚಿತ್ತೂರು ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ವೈದ್ಯ ದಂಪತಿಗಳಾದ ಡಾ. ಸುದರ್ಶನ್ ಮತ್ತು ಗಾಯತ್ರಿ ದೇವಿ ಅವರು ತಾವು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ‘ಬಾಕ್ಸಿ’ ಹೆಸರಿನ ಶ್ವಾನದ ನೆನಪಿಗಾಗಿ ಭವ್ಯವಾದ ಸಮಾಧಿಯನ್ನು ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ. ಸುಮಾರು ಒಂಬತ್ತು ವರ್ಷಗಳ ಹಿಂದೆ ರೊಟ್ವೀಲರ್ ತಳಿಯ ಈ ನಾಯಿಯನ್ನು ಮನೆಗೆ ತಂದಿದ್ದ ದಂಪತಿಗಳು, ಅದನ್ನು ಕೇವಲ ಪ್ರಾಣಿಯಂತೆ ನೋಡದೆ ಕುಟುಂಬದ ಒಬ್ಬ ಸದಸ್ಯನಂತೆಯೇ ಬೆಳೆಸಿದ್ದರು. ಎರಡು ಬಾರಿ ಮನೆಯಲ್ಲಿ ಕಳ್ಳತನಕ್ಕೆ ಪ್ರಯತ್ನ ನಡೆದಾಗ ಕಳ್ಳರನ್ನು ಹಿಡಿಯುವಲ್ಲಿ ಶೌರ್ಯ ಮೆರೆದಿದ್ದ ಬಾಕ್ಸಿ, ಮನೆಯ ಪಾಲಿನ ರಕ್ಷಕನಾಗಿದ್ದನು. ಇತ್ತೀಚೆಗೆ ಬಾಕ್ಸಿ ತೀವ್ರ ಅನಾರೋಗ್ಯಕ್ಕೆ ತುತ್ತಾದಾಗ, ಹೇಗಾದರೂ ಮಾಡಿ ಅವನನ್ನು ಉಳಿಸಿಕೊಳ್ಳಬೇಕೆಂದು ಪಣತೊಟ್ಟ ಕುಟುಂಬದವರು ಬೆಂಗಳೂರು ಮತ್ತು ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಕರೆದೊಯ್ದು ಸುಮಾರು 7 ಲಕ್ಷ ರೂಪಾಯಿಗಳನ್ನು ಚಿಕಿತ್ಸೆಗಾಗಿ ವ್ಯಯಿಸಿದ್ದರು.


ದುರದೃಷ್ಟವಶಾತ್, ವೈದ್ಯರ ಸತತ ಪ್ರಯತ್ನಗಳ ಹೊರತಾಗಿಯೂ ಬಾಕ್ಸಿ ನವೆಂಬರ್ 11 ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದನು. ಇದರಿಂದ ತೀವ್ರವಾಗಿ ನೊಂದ ಕುಟುಂಬಸ್ಥರು ಬಾಕ್ಸಿಯ ಅಗಲಿಕೆಯನ್ನು ಸಹಿಸಲಾರದೆ, ಅವನ ನೆನಪನ್ನು ಶಾಶ್ವತವಾಗಿಸಲು ನಿರ್ಧರಿಸಿದರು. ಅದರಂತೆ ಭಾರೀ ವೆಚ್ಚದಲ್ಲಿ ಸುಂದರವಾದ ಸಮಾಧಿಯನ್ನು ನಿರ್ಮಿಸಿ, ಅದರ ಮೇಲೆ ಬಾಕ್ಸಿಯ ಪ್ರತಿಮೆಯನ್ನು ಸಹ ಸ್ಥಾಪಿಸಿದ್ದಾರೆ.

ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಿದ ಈ ಕುಟುಂಬ, ಈಗ ಪ್ರತಿದಿನ ಆ ಸಮಾಧಿಯ ಬಳಿ ತೆರಳಿ ಪೂಜೆ ಸಲ್ಲಿಸುತ್ತಾ ತಮ್ಮ ಪ್ರೀತಿಯ ಒಡನಾಡಿಯನ್ನು ಸ್ಮರಿಸುತ್ತಿದೆ. ಮೂಕಜೀವಿಯ ಮೇಲಿನ ಈ ಅಪಾರ ಪ್ರೇಮ ಮತ್ತು ಮಾನವೀಯತೆಯು ಸಮಾಜಕ್ಕೆ ಒಂದು ದೊಡ್ಡ ಸಂದೇಶವನ್ನು ನೀಡಿದ್ದು, ಪ್ರಾಣಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ
