‘ವಾರ್ 2’ ಬಗ್ಗೆ ಕುತೂಹಲ ಹೆಚ್ಚಿಸಲು ಯಶ್ ರಾಜ್ ಫಿಲ್ಮ್ಸ್ ಹೊಸ ನಿಯಮ: ನಾಯಕರಿಗೆ ಪ್ರತ್ಯೇಕ ಪ್ರಚಾರ!

ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಅದಕ್ಕೆ ಹೆಚ್ಚಿನ ಪ್ರಚಾರ ನೀಡಲು ತಂಡದವರು ನಾನಾ ಕಸರತ್ತು ಮಾಡುತ್ತಾರೆ. ಅಲ್ಲದೆ, ಈ ಚಿತ್ರದಲ್ಲಿ ಅಪರೂಪದ ಕಲಾವಿದರ ಸಮಾಗಮ ಆಗಿದೆ ಎಂದರೆ ಅವರು ಆದಷ್ಟು ಒಟ್ಟಿಗೆ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಲಾಗುತ್ತದೆ. ಈ ಮೊದಲು ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಒಟ್ಟಾಗಿ ನಟಿಸಿದ್ದರು.

ಈ ವೇಳೆ ಅವರು ಯಾವುದೇ ಜಾಹೀರಾತುಗಳಲ್ಲಿ ನಟಿಸಿದಂತೆ ಷರತ್ತು ಹಾಕಲಾಗಿತ್ತು. ಈಗ ‘ವಾರ್ 2’ ( war 2) ಮುಖ್ಯಭೂಮಿಕೆಯಲ್ಲಿ ಇರೋರಿಗೂ ಇದೇ ರೀತಿಯ ಷರತ್ತು ಹಾಕಲಾಗಿದೆ.
ಯಶ್ ರಾಜ್ ಫಿಲ್ಮ್ಸ್ ಇತ್ತೀಚೆಗೆ ಸ್ಪೈ ಯೂನಿವರ್ಸ್ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಬಾರಿ ಅವರು ‘ವಾರ್ 2’ ಸಿನಿಮಾ ಮೂಲಕ ಬರಲು ರೆಡಿ ಆಗಿದ್ದಾರೆ. ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್ಟಿಆರ್ ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಆದರೆ, ಪ್ರಚಾರದ ವೇಳೆ ಇವರು ಒಟ್ಟಾಗಿ ಕಾಣಿಸೋದಿಲ್ಲ. ಏಕೆಂದರೆ ಇಬ್ಬರಿಗೂ ಪ್ರತ್ಯೇಕವಾಗಿ ಸಿನಿಮಾ ಪ್ರಚಾರ ಮಾಡುವಂತೆ ಸೂಚಿಸಲಾಗಿದೆ.

‘ವಾರ್ 2’ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಮುಖಾಮುಖಿ ಆಗೋದು ಗೊತ್ತೇ ಇದೆ. ಸುದ್ದಿಗೋಷ್ಠಿಯಲ್ಲಿ, ಸಂದರ್ಶನದಲ್ಲಿ ಇವರನ್ನು ಪದೇ ಪದೇ ನೋಡಿದರೆ ಈ ಜೋಡಿ ಮೇಲೆ ಅಷ್ಟು ಕ್ರೇಜ್ ಉಳಿದುಕೊಳ್ಳೋದಿಲ್ಲ ಎಂಬುದು ನಿರ್ಮಾಣ ಸಂಸ್ಥೆಯ ನಂಬಿಕೆ. ಈ ಕಾರಣದಿಂದಲೇ ತೆರೆಮೇಲೆ ಇವರನ್ನು ಮೊದಲ ಬಾರಿಗೆ ನೋಡಲಿ ಎಂದು ಯಶ್ ರಾಜ್ ಫಿಲ್ಮ್ಸ್ ಬಯಸುತ್ತಿದೆ.
ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ. ಅಭಿಮಾನಿಗಳು ಈ ಐಡಿಯಾಗೆ ಅಸಮಾಧಾನ ಹೊರಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರನ್ನು ನೋಡೋದಕ್ಕೂ, ಸಿನಿಮಾದಲ್ಲಿ ನೋಡೋದಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂಬ ಅಭಿಪ್ರಾಯವನ್ನು ಕೆಲವರು ಹೊರಹಾಕಿದ್ದಾರೆ. ಇನ್ನೂ ಕೆಲವರು ಅತೀ ಬುದ್ಧಿವಂತಿಕೆ ತೋರಿಸಿದರೆ ಈ ರೀತಿ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇವರನ್ನು ಒಟ್ಟಿಗೆ ತೆರಮೇಲೆ ತಂದರೆ ಚಿತ್ರಕ್ಕೆ ಮತ್ತಷ್ಟು ಪ್ರಚಾರ ಸಿಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
2019ರ ‘ವಾರ್’ ಚಿತ್ರದ ಮುಂದುವರಿದ ಭಾಗವಾಗಿ ‘ವಾರ್ 2’ ರಿಲೀಸ್ ಆಗುತ್ತಿದೆ. ಆಗಸ್ಟ್ 14ರಂದು ಚಿತ್ರ ಬಿಡುಗಡೆ ಕಾಣಲಿದೆ. ಅಯಾನ್ ಮುಖರ್ಜಿ ನಿರ್ದೇಶನ ಚಿತ್ರಕ್ಕೆ ಇದೆ. ಕಿಯಾರಾ ಅಡ್ವಾಣಿ ಚಿತ್ರಕ್ಕೆ ನಾಯಕಿ.
