ಸೋಮವಾರಪೇಟೆಯಲ್ಲಿ ಮರಗಳ್ಳರ ಅಟ್ಟಹಾಸ: ಅರಣ್ಯಾಧಿಕಾರಿಗಳಿಂದ ಗುಂಡಿನ ದಾಳಿ, ಓರ್ವನ ಬಂಧನ!

ಮಡಿಕೇರಿ: ಸೋಮವಾರಪೇಟೆ ಮೀಸಲು ಅರಣ್ಯದಲ್ಲಿ ತೇಗ (Teak Tree) ಸೇರಿದಂತೆ ಬೆಲೆಬಾಳುವ ಮರಗಳನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಓರ್ವನನ್ನ ವಲಯ ಅರಣ್ಯಾಧಿಕಾರಿಗಳು (Forest officers) ಬಂಧಿಸುವ ಘಟನೆ ನಡೆದಿದೆ. ಅಲ್ಲದೇ ತಲೆ ಮರೆಸಿಕೊಂಡಿರುವ ಉಳಿದ ಐವರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.


ಆರೋಪಿಗಳು ಸೋವವಾರಪೇಟೆ ವಲಯದ ಹುದುಗೂರು ಶಾಖಾ ವ್ಯಾಪ್ತಿಯ ಐಗೂರು ಗ್ರಾಮದ ಕಾಜೂರು ಅರಣ್ಯ ಪ್ರದೇಶದಲ್ಲಿ ತೇಗದ ಮರಗಳನ್ನ ಕಡಿದಿದ್ದರು. ಬಳಿಕ ಅವುಗಳನ್ನ ನಾಟಗಳಾನ್ನಾಗಿ ಪರಿವರ್ತಿಸಿ ಸಾಗಿಸಲು ಬೊಲೆರೋ ಪಿಕಪ್ ವಾಹನಕ್ಕೆ ತುಂಬಿಸುತ್ತಿದ್ದರು. ಇದೇ ವೇಳೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದರು.

ಈ ಸಂದರ್ಭ ಆರೋಪಿಗಳು ಅರಣ್ಯಾಧಿಕಾರಿಗಳ ಮೇಲೆಯೇ ಪ್ರತಿದಾಳಿಗೆ ಯತ್ನಿಸಿದ್ದರು. ನಂತರ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ರು. ಬಳಿಕ ಎಡವಾರೆ ಗ್ರಾಮದ ಓರ್ವ ಆರೋಪಿಯನ್ನ ಸ್ಥಳದಲ್ಲೇ ಬಂಧಿಸಿ ತೇಗದ ನಾಟಗಳನ್ನ ವಶಪಡಿಸಿಕೊಂಡಿದ್ದಾರೆ.

ಇನ್ನೂ ಘಟನಾ ಸ್ಥಳದಿಂದ ಎಸ್ಕೇಪ್ ಆದ ಓರ್ವನ ಬಂಧನಕ್ಕೆ ಆರ್‌ಎಫ್‌ಒ ಶೈಲೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸಿಸಿಎಫ್ ಸೋನಾಲ್, ಡಿಎಫ್‌ಒ ಅಭಿಷೇಕ್, ಎಸಿಎಫ್ ಎ.ಎ.ಗೋಪಾಲ್, ಅರಣ್ಯ ಸಂಚಾರ ದಳದ ಎಸಿಎಫ್ ಗಾನಶ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿದರು