ದಿಲ್ಲಿ ‘AC ಸ್ಫೋಟ’ ಪ್ರಕರಣದ ಹಿಂದೆ ರೋಚಕ ಕೊಲೆ ಸತ್ಯ: ಲಿವ್ ಇನ್ ಸಂಗಾತಿಯನ್ನು ಕೊಂದ ಫೋರೆನ್ಸಿಕ್ ವಿದ್ಯಾರ್ಥಿನಿ ಅಮೃತಾ!

ನವದೆಹಲಿ: ಇದೇ ಅಕ್ಟೋಬರ್ 6ರಂದು ಉತ್ತರ ದೆಹಲಿಯ ಗಾಂಧಿ ವಿಹಾರ್ ಬಿಲ್ಡಿಂಗ್‌ನ ಫ್ಲಾಟ್‌ನಲ್ಲಿ (Delhi’s Gandhi Vihar Flat) ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅಲ್ಲಿಗೆ ಧಾವಿಸಿದ್ದ ಅಗ್ನಿಶಾಮಕ ಸಿಬ್ಬಂದಿ 35 ವರ್ಷದ ಯುಪಿಎಸ್ಸಿ ಆಕಾಂಕ್ಷಿ ರಾಮಕೇಶ್ ಮೀನಾ ಅವರ ಸುಟ್ಟ ದೇಹವನ್ನ ಪತ್ತೆ ಮಾಡಿದ್ರು. ಮೊದಲಿಗೆ ಇದು AC (ಹವಾ ನಿಯಂತ್ರಣ) ಸ್ಫೋಟದಿಂದ ಆಗಿರುವ ದುರಂತ ಎಂದೇ ನಂಬಲಾಗಿತ್ತು. ಆದ್ರೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ, ದೆಹಲಿ ಪೊಲೀಸರ ಅನುಮಾನ, ಕೃತ್ಯದ ಬಳಿಕ ಸಿಕ್ಕ ಒಂದೇ ಒಂದೇ ಸುಳಿವು ರೋಚಕ ಸತ್ಯ ಬಯಲಿಗೆಳೆಯುವಲ್ಲಿ ಯಶಸ್ವಿಯಾಯ್ತು.

ಈ ಪ್ರಕರಣದ ಮಾಸ್ಟರ್ ಮೈಂಡ್, ಸೂತ್ರಧಾರಿ ಎಲ್ಲವೂ 21 ವರ್ಷದ ಫೋರೆನ್ಸಿಕ್ ಸೈನ್ಸ್ ವಿದ್ಯಾರ್ಥಿನಿ (Forensic Science Student) ಅಮೃತಾ. ಹತ್ಯೆಯಾದ ರಾಮಕೇಶ್ ಮೀನಾ ಆಕೆಯ ಲಿವ್ ಇನ್ ಪಾರ್ಟ್ನರ್.
ಎಕ್ಸ್ ಬಾಯ್‌ಫ್ರೆಂಡ್ ಜೊತೆ ಸೇರಿ ಹಾಕಿದ್ಳು ಸ್ಕೆಚ್
ಯೆಸ್. ಅಮೃತಾ, ಮೀನಾ ಇಬ್ಬರು ಲಿವ್ ಇನ್ ಪಾರ್ಟ್ನರ್. ಆದ್ರೆ ರಾಮಕೇಶ್ ಅಮೃತಾಳ ಖಾಸಗಿ ವಿಡಿಯೋವನ್ನ ರಹಸ್ಯವಾಗಿ ರೆಕಾರ್ಡ್ ಮಾಡಿಟ್ಟುಕೊಂಡಿದ್ದ. ವಿಡಿಯೋಗಳನ್ನ ಡಿಲೀಟ್ ಮಾಡುವಂತೆ ಕೇಳಿಕೊಂಡರೂ ನಿರಾಕರಿಸಿದ್ದ. ಇದರಿಂದ ಅಮೃತಾ, ಮೀನಾ ಮೇಲೆ ಸಿಟ್ಟಾಗಿದ್ದಳು. ಕೊನೆಗೆ ಮೊರಾಬಾದ್‌ನಲ್ಲಿ ಗ್ಯಾಸ್ ಏಜೆನ್ಸಿ (Gas Agency) ಹೊಂದಿದ್ದ ತನ್ನ ಎಕ್ಸ್ ಬಾಯ್‌ಫ್ರೆಂಡ್‌ಗೆ (Boyfriend) ಈ ವಿಷಯವನ್ನೆಲ್ಲ ತಿಳಿಸಿದಳು. ಆ ನಂತರ ಇಬ್ಬರು ಒಟ್ಟಾಗಿ ಸೇರಿ ಕೊಲೆಗೆ ಪ್ಲ್ಯಾನ್ ಮಾಡಿದ್ರು.
ತಾನು ಫೋರೆನ್ಸಿಕ್ ಸೈನ್ಸ್ ವಿದ್ಯಾರ್ಥಿನಿ ಆಗಿದ್ದರಿಂದ ಕೃತ್ಯ ನಡೆದ ಸ್ಥಳ ಸಂಪೂರ್ಣ ಸುಟ್ಟುಹೋದ್ರೆ, ಫೋರೆನ್ಸಿಕ್ ಅಧಿಕಾರಿಗಳಿಗೆ ಯಾವುದೇ ಸಾಕ್ಷ್ಯ ಸಿಗಲ್ಲ ಅಂತ ಅಮೃತಾ ನಂಬಿದ್ದಳು. ಇತ್ತ ಎಕ್ಸ್ ಬಾಯ್‌ಫ್ರೆಂಡ್ ಗ್ಯಾಸ್ ಎಜೆನ್ಸಿ ಹೊಂದಿದ್ದರಿಂದ ಸುಲಭವಾಗಿ ಗ್ಯಾಸ್ ಸಿಲಿಂಡರ್ ಲಭ್ಯವಿರುತ್ತಿತ್ತು. ಜೊತೆಗೆ ಅವನಿಗೆ ಸ್ಫೋಟಿಸುವುದೂ ಗೊತ್ತಿತ್ತು. ಇಬ್ಬರಷ್ಟೇ ಈ ಕೆಲಸಕ್ಕೆ ಸಾಲೋದಿಲ್ಲ ಅಂತ ಎಕ್ಸ್‌ಬಾಯ್‌ಫ್ರೆಂಡ್ ಗೆಳೆಯನನ್ನೂ ಸೇರಿಸಿಕೊಂಡು ಸ್ಕೆಚ್ ಹಾಕಿದ್ರು.
ಹತ್ಯೆ ನಡೆದಿದ್ದು ಹೇಗೆ?
ಇದೇ ಅಕ್ಟೋಬರ್ 6ರ ಮುಂಜಾನೆ ಮೂವರು ಗಾಂಧಿವಿಹಾರ್ ಬಿಲ್ಡಿಂಗ್‌ನ ಫ್ಲ್ಯಾಟ್‌ಗೆ ಪ್ರವೇಶಿಸಿದ್ರು. ಫ್ಲ್ಯಾಟ್‌ನಲ್ಲಿದ್ದ ಮೀನಾನನ್ನ ಮೊದಲು ಕತ್ತು ಹಿಸುಕಿ ಕೊಲೆ ಮಾಡಿದ್ರು. ಬಳಿಕ ಅವನ ಹಾರ್ಡ್ ಡಿಸ್ಕ್, ಲ್ಯಾಪ್‌ಟಾಪ್ ಹಾಗೂ ಬೆಲೆ ಬಾಳುವ ವಸ್ತುಗಳೆಲ್ಲವನ್ನೂ ಎತ್ತಿಟ್ಟುಕೊಂಡರು. ಸಾಕ್ಷ್ಯ ಸುಳಿವು ಸಿಗುವ ಎಲ್ಲಾ ವಸ್ತುಗಳನ್ನ ಎತ್ತಿಟ್ಟುಕೊಂಡಿದ್ರು. ಇದು ಕೊಲೆ ಅಂತ ಗೊತ್ತೇ ಆಗದಂತೆ ಮಾಡಲು ರಾಮಕೇಶ್ ದೇಹವನ್ನ ಎಣ್ಣೆ, ತುಪ್ಪ ಹಾಗೂ ಮದ್ಯ ಸುರಿದು ಸುಟ್ಟುಬಿಟ್ಟರು. ನಂತರ ಓಪನ್ ಸಿಲಿಂಡರ್ ಬಳಸಿ ಸ್ಫೋಟಿಸಿದ್ರು. ಫ್ಲ್ಯಾಟ್‌ಗೆ ಉಳಿದ ವಸ್ತುಗಳಿಗೆ ಬೆಂಕಿ ಹಚ್ಚಿ ಯಾವುದೇ ಸಾಕ್ಷ್ಯ ಸಿಗದಂತೆ ಮಾಡಿದ್ರು. ತಾವು ಬಚಾವ್ ಆಗ್ತೀವಿ ಅಂತ ತಿಳಿದುಕೊಂಡು ಗ್ಯಾಸ್ ಸ್ಫೋಟಿಸಿ ಅಲ್ಲಿಂದ ಪರಾರಿಯಾಗಿದ್ದರು. ಅವರು ಅಲ್ಲಿಂದ ಪರಾರಿಯಾದ 15 ನಿಮಿಷಗಳಲ್ಲಿ ಅವರಿದ್ದ ಫ್ಲ್ಯಾಟ್ ಸಂಪೂರ್ಣ ಸ್ಫೋಟಗೊಂಡು ಬೆಂಕಿಯಲ್ಲಿ ಉರಿಯಿತು.
ಸಿಕ್ಕಿಬಿದ್ದದ್ದು ಹೇಗೆ?
ಇನ್ನೂ ಪ್ರಕರಣ ಭೇದಿಸಿದ ಪೊಲೀಸರು ಸ್ಫೋಟಕ ವಿಚಾರಗಳನ್ನ ಬಯಲಿಗೆಳೆದಿದ್ದಾರೆ. ಆಕೆ ಸಿಕ್ಕಿಬಿದ್ದ ವಿಚಾರವನ್ನೂ ತಿಳಿಸಿದ್ದಾರೆ. ಕೊಲೆ ಮಾಡಿಸಿದ ಅಮೃತಾ ಇದೊಂದು ಆಕಸ್ಮಿಕ ಘಟನೆ ಅಂತ ಬಿಂಬಿಸಲು ಪ್ರಯತ್ನಿಸಿದ್ದಳು. ಆದ್ರೆ ಅನೇಕ ಸುಳಿವುಗಳನ್ನ ಬಿಟ್ಟುಹೋಗಿದ್ದಳು ಅಂತ ತಿಳಿಸಿದ್ದಾರೆ.
ಸುಳಿವು ಸಿಕ್ಕಿದ್ದು ಎಲ್ಲಿ?
* ಸುಳಿವು 1: ದೇಹದ ಭಾಗಗಳು ಭಾಗಶಃ ಸುಟ್ಟುಹೋಗಿತ್ತು, ಮೂಳೆಗಳು ಬೆಂಕಿಗೆ ಬೂದಿಯಾಗಿತ್ತು. ಆದ್ರೆ ಎಸಿ ಸ್ಫೋಟದಿಂದ ಇಷ್ಟು ಪ್ರಮಾಣದಲ್ಲಿ ದೇಹ ಸುಡಲು ಸಾಧ್ಯವಿಲ್ಲ ಎಂದು ತನಿಖಾಧಿಕಾರಿಗಳು ಅದಾಜಿಸಿದ್ರು. ಇದು ಕೊಲೆ ಅನುಮಾನಕ್ಕೆ ಕಾರಣವಾಯಿತು.
* ಸುಳಿವು 2: ಗ್ಯಾಸ್ ಸಿಲಿಂಡರ್ ಸುಟ್ಟ ದೇಹಕ್ಕೆ ಸಲ್ಪ ಹತ್ತಿರದಲ್ಲೇ ಇತ್ತು. ಅಲ್ಲದೇ ಇದು ಫ್ಲ್ಯಾಟ್‌ನಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧವಿಲ್ಲ ಎಂಬುದನ್ನ ಫೋರೆನ್ಸಿಕ್ ಮೂಲಕ ಅಧಿಕಾರಿಗಳು ಖಚಿತಪಡಿಸಿಕೊಂಡರು.
* ಸುಳಿವು 3: ಆರಂಭದಲ್ಲಿ ಎಸಿ ಸ್ಫೋಟದಿಂದ ದುರಂತ ಸಂಭವಿಸಿದೆ ಎಂದು ನಂಬಲಾಗಿತ್ತು. ಆದ್ರೆ ಎಸಿ ಘಟಕಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಇದರಿಂದ ಪೊಲೀಸರ ಅನುಮಾನ ನಿಜವಾಯ್ತು.
* ಸುಳಿವು 4: ಘಟನೆ ನಡೆದ ನಂತರ ಅಮೃತಾಳ ಫೋನ್ ಸ್ವಿಚ್‌ಆಫ್ ಆಗಿತ್ತು.
* ಸುಳಿವು 5: ಘಟನೆಗೂ ಮುನ್ನ ಮೂವರು ಮುಸುಕುಧಾರಿಗಳು ಫ್ಲ್ಯಾಟ್ ಪ್ರವೇಶ ಮಾಡಿದ್ದರು. ಅವರಲ್ಲಿ ಅಮೃತಾ ಕೂಡ ಒಬ್ಬಳಾಗಿದ್ದಳು. ಸ್ಫೋಟ ಸಂಭವಿಸುವ 15 ನಿಮಿಷಕ್ಕೂ ಮುನ್ನ ಅವರು ಅಲ್ಲಿಂದ ಎಸ್ಕೇಪ್ ಆಗಿದ್ದರು. ಇದೆಲ್ಲವು ಸೆರೆಯಾಗಿದ್ದ ಸಿಸಿಟಿವಿ ದೃಶ್ಯ ಪೊಲೀಸರಿಗೆ ಲಭ್ಯವಾಯಿತು.
ಇದೆಲ್ಲದರ ಆಧಾರದ ಮೇಲೆ ತೀವ್ರ ವಿಚಾರಣೆ ನಡೆಸಿದಾಗ ಅಮೃತಾ ಕೃತ್ಯ ಎಸಿಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಬಂಧಿತರಿಂದ ಅನೇಕ ಡಿಜಿಟಲ್ ಸಾಧನಗಳು ಹಾಗೂ ಕದ್ದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಅಮೃತಾ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.