ರಾಯಚೂರಿನಲ್ಲಿ ಮೂವರು ಯುವತಿಯರ ಆತ್ಮಹತ್ಯೆ ಯತ್ನ: ಘಟನೆ ಹಿಂದಿನ ಆಘಾತಕಾರಿ ‘ಲವ್ ಸ್ಟೋರಿ’ ಬಯಲು

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಕೆ. ಇರಬಗೇರಾ ಗ್ರಾಮದಲ್ಲಿ ಮೂವರು ಯುವತಿಯರು ಆತ್ಮಹ*ತ್ಯೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ಆಘಾತಕಾರಿ ಸತ್ಯಾಂಶಗಳು ಬೆಳಕಿಗೆ ಬಂದಿವೆ. ಇದು ಕೌಟುಂಬಿಕ ಸಮಸ್ಯೆಯಿಂದ ನಡೆದ ಘಟನೆ ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಆದರೆ, ಲವ್ ಸ್ಟೋರಿಯೊಂದು ಈ ದುರ್ಘಟನೆಗೆ ಕಾರಣ ಎಂಬುದು ಈಗ ಖಚಿತವಾಗಿದೆ.

ಈ ಘಟನೆಯಲ್ಲಿ ಮೃತಪಟ್ಟ ರೇಣುಕಾ (18), ಹಾಗೂ ಬದುಕುಳಿದ ತಿಮ್ಮಕ್ಕ (24) ಮತ್ತು ಇನ್ನೊಬ್ಬ 17 ವರ್ಷದ ಅಪ್ರಾಪ್ತ ಯುವತಿಯರು ಎಲ್ಲರಿಗೂ ಪ್ರೇಮ ಸಂಬಂಧವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇವರಲ್ಲಿ ಒಬ್ಬರಾದ ರೇಣುಕಾ ಅವರಿಗೆ ಬೇರೊಬ್ಬ ಯುವಕನ ಜೊತೆ ವಿವಾಹ ನಿಶ್ಚಿತಾರ್ಥ ನಿಗದಿಪಡಿಸಿದ್ದೇ ಆತ್ಮಹತ್ಯೆಯ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ತಮ್ಮ ತಮ್ಮ ಪ್ರೇಮ ಸಂಬಂಧಗಳು ಗ್ರಾಮದ ಜನರ ಮುಂದೆ ಬಹಿರಂಗಗೊಳ್ಳುವ ಭಯದಿಂದ ಮೂವರು ಒಟ್ಟಾಗಿ ಆತ್ಮಹ*ತ್ಯೆಗೆ ಶರಣಾಗಲು ಯತ್ನಿಸಿದ್ದರು.
ಮಗಳ ಸಾವಿನಲ್ಲಿ ಅನುಮಾನ, ಪೋಷಕರಿಂದ ದೂರು
ಈ ಘಟನೆಯಲ್ಲಿ ರೇಣುಕಾ ಸಾವನ್ನಪ್ಪಿದ್ದು, ತಿಮ್ಮಕ್ಕ ಗಂಭೀರ ಸ್ಥಿತಿಯಲ್ಲಿದ್ದು ಹಾಗೂ ಅಪ್ರಾಪ್ತ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಮಗಳ ಸಾವಿನಲ್ಲಿ ಅನುಮಾನವಿದೆ ಎಂದು ಮೃತ ರೇಣುಕಾ ಅವರ ಪೋಷಕರು ದೇವದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರೇಣುಕಾ ಹೊಲಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದ್ದು, ಆಕೆಯ ಸಾವಿಗೆ ತಿಮ್ಮಕ್ಕ ಮತ್ತು ಇನ್ನೊಬ್ಬ ಯುವತಿಯೇ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆದರೆ, ಪೊಲೀಸರು ನಡೆಸಿದ ತನಿಖೆಯಲ್ಲಿ ಆತ್ಮಹತ್ಯೆ ಹಿಂದಿನ ಲವ್ ಸ್ಟೋರಿ ಬೆಳಕಿಗೆ ಬಂದಿದೆ. ಕಳೆದ ಒಂದು ವಾರದ ಹಿಂದೆಯೇ ಮೂವರು ಯುವತಿಯರು ಆತ್ಮಹ*ತ್ಯೆ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದು, ಇದರ ಬಗ್ಗೆ ಪರಸ್ಪರ ಚರ್ಚಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರು ಎಲ್ಲ ಆಯಾಮಗಳಿಂದ ಪರಿಶೀಲಿಸುತ್ತಿದ್ದಾರೆ. ಈ ಘಟನೆಯು ಗ್ರಾಮದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಲವ್ ಮಾಡೋ ಹುಡುಗನಿಗೆ ಮದುವೆ ಮಾಡಿಕೊಡಲು ಮನವಿ
ಒಂದೇ ಗ್ರಾಮದ ಯುವತಿಯರಾದ ಮೂವರೂ ತಾವು ಪ್ರೀತಿ ಮಾಡುವ ಹುಡುಗರು, ಅವರೊಂದಿಗೆ ಸುತ್ತಾಟ ಹಾಗೂ ಮಾತುಕತೆಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಂಡಿದ್ದಾರೆ. ಮೂವರು ಹುಡುಗಿಯರನ್ನು ಪ್ರೀತಿ ಮಾಡುತ್ತಿದ್ದ ಹುಡುಗರು ಕೂಡ ಮದುವೆ ಮಾಡಿಕೊಳ್ಳಲು ಸಿದ್ಧರಿರುವುದಾಗಿ ಹೇಳಿದ್ದರು. ಈ ವಿಚಾರವನ್ನು ಸ್ವತಃ ಯುವತಿಯರು ಮನೆಯಲ್ಲಿ ಹೇಳಿದ್ದು, ತಾವು ಲವ್ ಮಾಡೋ ಹುಡುಗನಿಗೆ ಮದುವೆ ಮಾಡಿಕೊಡಲು ಮನವಿ ಮಾಡಿದ್ದಾರೆ. ಆದರೆ, ಮನೆಯಲ್ಲಿ ಇದನ್ನು ತಿರಸ್ಕರಿಸಿದ್ದು, ತರಾತುರಿಯಲ್ಲಿ ರೇಣುಕಾಗೆ ಮದುವೆ ಮಾಡಲು ಕೂಡ ನಿಶ್ಚಯ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರೀತಿ ಮಾಡುವವರನ್ನು ಬುಟ್ಟು ಬೇರೊಬ್ಬರೊಂದಿಗೆ ಮದುವೆ ಮಾಡಿಬಿಡುತ್ತಾರೆ ಎಂಬ ಭಯದಿಂದ, ಮೂವರೂ ಸ್ನೇಹಿತೆಯರು ಹೊಲಕ್ಕೆ ಹೋದಾಗ ವಿಷ ಸೇವನೆ ಮಾಡುವುದಕ್ಕೆ ತೀರ್ಮಾನಿಸಿದ್ದಾರೆ. ಇನ್ನು ಜಮೀನಿನಲ್ಲಿ ತಿಮ್ಮಕ್ಕ ವಿಷ ಸೇವನೆ ಮಾಡಿದ ತಕ್ಷಣವೇ ಸ್ಥಳಕ್ಕೆ ಬಂದ ಮತ್ತೊಬ್ಬ ಯುವತಿ ವಿಷದ ಬಾಟಲಿಯನ್ನು ಕಿತ್ತೆಸೆದಿದ್ದಾರೆ. ಆಗ ವಿಷ ಸೇವಿಸಿದ ತಿಮ್ಮಕ್ಕ ನರಳಾಡಿ ನಿತ್ರಾಣಗೊಂಡು ಮೂರ್ಛೆ ಹೋಗಿದ್ದಾಳೆ. ಆಗ ತಿಮ್ಮಕ್ಕ ಸತ್ತಳೆಂದು ಭಯಗೊಂಡ ರೇಣುಕಾ ಮತ್ತು ಅಪ್ರಾಪ್ತ ಯುವತಿ ಇಬ್ಬರೂ ಪಕ್ಕದಲ್ಲಿಯೇ ಇದ್ದ ಬಾವಿಗೆ ಹಾರಿದ್ದಾರೆ. ತಕ್ಷಣವೇ ಅಕ್ಕ-ಪಕ್ಕದ ಜನರು ಬಂದು ರಕ್ಷಣೆಗೆ ಧಾವಿಸಿದ್ದಾರೆ. ಅಷ್ಟೊತ್ತಿಗೆ ರೇಣುಕಾ ಮೃತಪಟ್ಟಿದ್ದು, ಅಪ್ರಾಪ್ತ ಯುವತಿ ಬದುಕುಳಿದಿದ್ದಾಳೆ.
