ವಾಹನಗಳಿಗೆ ಬೆಂಕಿ ಹಚ್ಚಿದ್ದ ಮೂವರು ಕಿಡಿಗೇಡಿಗಳ ಬಂಧನ

ಬೆಂಗಳೂರು: ಇತ್ತೀಚೆಗೆ ಹಲಸೂರಿನ ಕಾಳಿಯಮ್ಮ ಸ್ಟ್ರೀಟ್‌ನಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿ ಪುಂಡಾಟಿಕೆ ಮಾಡಿದ್ದ ಮೂವರು ಕಿಡಿಗೇಡಿಗಳನ್ನು ಹಲಸೂರು ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಕೆ.ಜಿ.ಹಳ್ಳಿಯ ಪಿಳ್ಳಣ್ಣ ಗಾರ್ಡನ್ ನಿವಾಸಿ ಮಕ್ಸುದ್ ಅಹ್ಮದ್ (26), ಸಂಪಿಗೆ ಹಳ್ಳಿಯ ದಾಲಪ್ಪ ಲೇಔಟ್‌ನ ಇಜಾರ್ ಪಾಷಾ (24), ಗೋವಿಂದಪುರದ ಹಮೀತ್ ತಬ್ರೇಜ್ (26) ಬಂಧಿತರು.
ಜುಲೈ 28 ರಂದು ಕಾಳಿಯಮ್ಮ ಸ್ಟೀಟ್‌ನಲ್ಲಿ 10 ಬೈಕ್‌ಗಳು, 1 ಸೈಕಲ್ ಗಳು, ಕೈಕಾ ಹೆಸರಿನ ಮುಸ್ಲಿಂ ಧರ್ಮ ಸಂಸ್ಧೆಗೆ ಸೇರಿದ ಕಾರು ಹಾಗೂ ತರಕಾರಿ ಅಂಗಡಿಗೆ ಬೆಂಕಿ ಇಟ್ಟು ಆರೋಪಿಗಳು ಪರಾರಿಯಾಗಿದ್ದರು.
ಹಲಸೂರಿನ ಬಜಾರ್‌ಸ್ಟೀಟ್‌ನಲ್ಲಿ ತರಕಾರಿ ಕೆಲವು ತಿಂಗಳುಗಳ ಹಿಂದೆ ಮಕ್ಸುದ್ ಅಹ್ಮದ್ ತರಕಾರಿ ಮಾರಾಟ ಮಾಡುತ್ತಿದ್ದ. ಕೊಲೆ ಪ್ರಕರಣವೊಂದರಲ್ಲಿ ಪ್ರಸ್ತುತ ಜೈಲಿನಲ್ಲಿರುವ ಇಬ್ಬರು ಸ್ಥಳೀಯರಾದ ಫಹಾದ್ ಮತ್ತು ಸರ್ಫುದ್ದೀನ್ ಮಕ್ಸುದ್ ಅಹ್ಮದ್ ಅವರನ್ನು ಸಾರ್ವಜನಿಕವಾಗಿ ಹಲ್ಲೆ ನಡೆಸಿ, ಅಮಾನಿಸಿದ್ದರು. ಘಟನೆ ಬಳಿಕ ಮಕ್ಸುದ್ ಅಹ್ಮದ್ ಡಿಜೆ ಹಳ್ಳಿಗೆ ಸ್ಥಳಾಂತರಗೊಂಡಿದ್ದ. ಆದರೆ, ಮನಸ್ಸಿನಲ್ಲಿ ದ್ವೇಷ ಹಸಿಯಾಗಿಯೇ ಇತ್ತು.
ಈ ನಡುವೆ ಸೇಡು ಸೇರಿಸಿಕೊಳ್ಳಲು ನಿರ್ಧರಿಸಿದ್ದ ಮಕ್ಸುದ್ ಅಹ್ಮದ್, ಹಲಸೂರಿನಲ್ಲಿ ತನ್ನ ಪ್ರಭಾವ ಏನೆಂಬುದನ್ನು ಜೈಲಿನಲ್ಲಿರುವ ಆರೋಪಿಗಳಿಗೆ ತಿಳಿಸುವ ಸಲುವಾಗಿ ಇಬ್ಬರು ಸಹಚರರೊಂದಿಗೆ ಸೇರಿಕೊಂಡು ಕಾಳಿಯಮ್ಮ ಸ್ಟ್ರೀಟ್‌ನಲ್ಲಿ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದ.
ಈ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಆರೋಪಿಗಳು ಟವೆಲ್ ನಿಂದ ಮುಖ ಮುಚ್ಚಿಕೊಂಡಿರುವುದು ಕಂಡು ಬಂದಿತ್ತು. ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು, ತಾಂತ್ರಿಕ ಸಾಕ್ಷ್ಯಾಧಾರಗಳನ್ನಾಧರಿಸಿ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಮೂವರ ವಿರುದ್ಧ ರೌಡಿಶೀಟರ್ ತೆರೆಯಲಾಗುವುದು ಎಂದು ಡಿಸಿಪಿ (ಪೂರ್ವ) ಡಿ.ದೇವರಾಜ್ ಅವರು ಹೇಳಿದ್ದಾರೆ.
