ಕೌಟುಂಬಿಕ ಕಲಹಕ್ಕೆ ಬಲಿಯಾದ ಮೂರು ಜೀವಗಳು; ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹ*ತ್ಯೆ

ಯಲಬುರ್ಗಾ: ತಾಲ್ಲೂಕಿನ ಮಾರನಾಳ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗುರುವಾರ ನಡೆದಿದೆ.
ಮೃತರನ್ನು ಬಾಳವ್ವ ಕುರಿ (35) ಹುಲಿಗಮ್ಮ (9) ಮತ್ತು ವಿಜಯಮ್ಮ (8) ಎಂದು ಗುರುತಿಸಲಾಗಿದೆ.
ಪತಿ ಶರಣಪ್ಪ ಮತ್ತು ಬಾಳವ್ವ ನಡುವೆ ನಡೆದ ಸಣ್ಣ ಜಗಳವು ತೀವ್ರ ಸ್ವರೂಪ ಪಡೆದು, ಮನನೊಂದು ಬಾಳವ್ವ ಈ ದಾರುಣ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಪತಿಯ ನಿರಂತರ ಕಿರುಕುಳವೇ ಈ ಘಟನೆಯ ಪ್ರಮುಖ ಕಾರಣವಾಗಿರಬಹುದು ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೋಲೀಸರು ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಯಿ ಮತ್ತು ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪತಿ ಶರಣಪ್ಪ ವಿಚಾರಣೆಗೆ ಒಳಗಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
