ಮತಾಂತರ ಹಾಗೂ ನಕಲಿ ದಾಖಲೆ ಬಳಸಿ ಮದುವೆ: ಮೂವರ ಬಂಧನ

ಚೆನ್ನೈ: 28 ವರ್ಷದ ಮಹಿಳೆಯನ್ನು ಇಸ್ಲಾಂಗೆ ಮತಾಂತರಿಸಿ ಮದುವೆಯಾಗುವಂತೆ ಒತ್ತಾಯಿಸಿದ ಆರೋಪದ ಮೇಲೆ ಪ್ರಮುಖ ಆರೋಪಿ ರಾಜಾ ಮಿಯಾನ್ ಅಲಿಯಾಸ್ ಎಹ್ಸಾನ್ ಸೇರಿದಂತೆ ಮೂವರನ್ನು ಬಂಧಿಸಿರುವುದಾಗಿ ನೋಯ್ಡಾ ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಹಿಳೆಯ ತಾಯಿ ತನ್ನ ಮಗಳ ರಕ್ಷಣೆ ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಆರು ವರ್ಷದ ಮಗುವಿನ ತಾಯಿಯಾಗಿದ್ದ ಮಹಿಳೆಯನ್ನು ಚೆನ್ನೈನಲ್ಲಿ ಪತ್ತೆಹಚ್ಚಿ ವಾಪಸ್ ಕರೆತಂದಿದ್ದಾರೆ.
ಆರೋಪಿಗಳು ಮಹಿಳೆಯನ್ನು ಸಂಬಂಧಕ್ಕೆ ಆಮಿಷವೊಡ್ಡಿ, ಬಲವಂತವಾಗಿ ಮತಾಂತರಿಸಿದ ನಂತರ ಆಕೆಯ ಹೆಸರನ್ನು ಬದಲಾಯಿಸಿದ್ದರು ಮತ್ತು ನಕಲಿ ದಾಖಲೆಗಳನ್ನು ಬಳಸಿ ಇಸ್ಲಾಮಿಕ್ ವಿವಾಹ ನಡೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಇನ್ನೂ ತನ್ನ ಪತಿಯೊಂದಿಗೆ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿರಲಿಲ್ಲ ಎಂದು ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಪ್ರಮುಖ ಆರೋಪಿ ರಾಜಾ ಮಿಯಾನ್ ಕುಟುಂಬ ಈ ಅಪರಾಧದಲ್ಲಿ ಸಕ್ರಿಯ ಪಾತ್ರ ವಹಿಸಿದ್ದು, ಆತನ ತಾಯಿ ಮಹಿಳೆಯ ಚಿಕ್ಕಮ್ಮನಂತೆ ನಟಿಸಿದ್ದು, ಆತನ ಸಹೋದರ ಮದುವೆಗೆ ಅನುಕೂಲ ಮಾಡಿಕೊಡಲು ಆಕೆಯ ಸಹೋದರನಂತೆ ನಟಿಸಿದ್ದಾನೆ. ಸ್ಥಳೀಯ ಧರ್ಮಗುರುವೊಬ್ಬ ನಕಲಿ ನಿಕಾಹವನ್ನೂ ಮಾಡಿದ್ದ ಎಂದು ದಾಖಲಾಗಿದೆ. ರಾಜಾ ಮಿಯಾನ್, ಆತನ ತಂದೆ ಮತ್ತು ತಾಯಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ, ಸಹೋದರ ಮತ್ತು ಧರ್ಮಗುರು ಇನ್ನೂ ತಲೆಮರೆಸಿಕೊಂಡಿದ್ದಾರೆ.ಈ ವಿಷಯದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.