ಪಾಕ್ ವೈಮಾನಿಕ ದಾಳಿಗೆ ಮೂವರು ಅಫ್ಘಾನ್ ಕ್ರಿಕೆಟಿಗರು ಬಲಿ

ಅಫ್ಘಾನಿಸ್ತಾನ್ ಹಾಗೂ ಪಾಕಿಸ್ತಾನ್ ನಡುವಣ ಸೇನಾ ಸಂಘರ್ಷ ಮುಂದುವರೆದಿದೆ. ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಭಾರತ ಭೇಟಿ ಬೆನ್ನಲ್ಲೇ ಪಾಕಿಸ್ತಾನ್ ಕಾಬೂಲ್ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಗೆ ಪ್ರತೀಕಾರವಾಗಿ ಅಫ್ಘಾನಿಸ್ತಾನ್ ಡುರಾಂಡ್ ಲೈನ್ ಬಾರ್ಡರ್ನಲ್ಲಿ 12 ಪಾಕಿಸ್ತಾನ್ ಸೈನಿಕರನ್ನು ಹತ್ಯೆ ಮಾಡಿದ್ದರು. ಇದೀಗ ಮತ್ತೊಮ್ಮೆ ಪಾಕ್ ಸೇನೆಯು ಗಡಿ ಭಾಗದಲ್ಲಿ ದಾಳಿ ನಡೆಸಿದ್ದು, ಈ ದಾಳಿಯಿಂದಾಗಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಮೃತಪಟ್ಟಿದ್ದಾರೆ.

ಸೌಹಾರ್ದ ಪಂದ್ಯದಲ್ಲಿ ಭಾಗವಹಿಸಲು ಅಫ್ಘಾನಿಸ್ತಾನದ ಸ್ಥಳೀಯ ಆಟಗಾರರು ಪಾಕಿಸ್ತಾನ ಗಡಿಯಲ್ಲಿರುವ ಪೂರ್ವ ಪಕ್ತಿಕಾ ಪ್ರಾಂತ್ಯದ ಉರ್ಗುನ್‌ನಿಂದ ಶರಾನಾಗೆ ಪ್ರಯಾಣಿಸಿದ್ದರು. ಈ ವೇಳೆ ದಾಳಿ ನಡೆದಿದ್ದು, ಇದರಿಂದ ಮೂವರು ಕ್ರಿಕೆಟಿಗರು ಸಾವನ್ನಪ್ಪಿದ್ದು, ಇನ್ನು ಕೆಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪಾಕ್ ದಾಳಿಯಿಂದಾಗಿ ಸಾವನ್ಯಪ್ಪಿದ ಕ್ರಿಕೆಟಿಗರನ್ನು ಕಬೀರ್, ಸಿಬ್ಘತುಲ್ಲಾ ಮತ್ತು ಹರೂನ್ ಎಂದು ಗುರುತಿಸಲಾಗಿದೆ. ಇದೀಗ ಈ ದಾಳಿ ವಿರುದ್ಧ ಅಫ್ಘಾನಿಸ್ತಾನ್ ಕ್ರಿಕೆಟಿಗರು ಧ್ವನಿಯೆತ್ತಿದ್ದು, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಆಕ್ರೋಶವನ್ನು ಹೊರಹಾಕಿದ್ದಾರೆ.
ಇದು ಅಫ್ಘಾನಿಸ್ತಾನದ ಕ್ರೀಡಾ ಸಮುದಾಯ, ಕ್ರಿಕೆಟ್ ಕುಟುಂಬಕ್ಕೆ ದೊಡ್ಡ ನಷ್ಟ. ದುಃಖಿತ ಕುಟುಂಬಗಳಿಗೆ ಸಂತಾಪ ಮತ್ತು ಅವರೊಂದಿಗೆ ನಾವು ಇರಲಿದ್ದೇವೆ ಎಂದು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಈ ದಬ್ಬಾಳಿಕೆಗಾರರು ಮುಗ್ಧ ನಾಗರಿಕರು ಮತ್ತು ನಮ್ಮ ದೇಶೀಯ ಕ್ರಿಕೆಟ್ ಆಟಗಾರರ ಹತ್ಯೆ ಮಾಡಿದ್ದು ಘೋರ, ಕ್ಷಮಿಸಲಾಗದ ಅಪರಾಧ ಎಂದು ಅಫ್ಘಾನ್ ಅಂತಾರಾಷ್ಟ್ರೀಯ ಕ್ರಿಕೆಟಿಗ ಫಜಲ್ಹಕ್ ಫಾರೂಕಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಈ ಘಟನೆ ಪಕ್ತಿಕಾಗೆ (ಅಫ್ಘಾನಿಸ್ತಾನ್ ಊರು) ಮಾತ್ರವಲ್ಲದೆ, ಇಡೀ ಅಫ್ಘಾನಿಸ್ತಾನ್ ಕ್ರಿಕೆಟ್ ಕುಟುಂಬ ಮತ್ತು ಇಡೀ ರಾಷ್ಟ್ರಕ್ಕೆ ದುಃಖಕರ ವಿಷಯ ಎಂದು ಮತ್ತೊಬ್ಬ ಅಂತರರಾಷ್ಟ್ರೀಯ ಆಟಗಾರ ಮೊಹಮ್ಮದ್ ನಬಿ, ಪಾಕ್ ದಾಳಿಯನ್ನು ಖಂಡಿಸಿ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಪಾಕಿಸ್ತಾನ್ ದಾಳಿಗೆ ಅಫ್ಘಾನಿಸ್ತಾನ್ ಕ್ರಿಕೆಟಿಗರು ಆಕ್ರೋಶ ಹೊರಹಾಕಿರುವ ಕಾರಣ ಪಾಕ್ ವಿರುದ್ಧದ ಮುಂದಿನ ಸರಣಿಯಲ್ಲಿ ಅಫ್ಘಾನಿಸ್ತಾನ್ ಕಾಣಿಸಿಕೊಳ್ಳುವುದು ಅನುಮಾನ. ಇದಕ್ಕೂ ಮುನ್ನ ಕಾಬೂಲ್ ದಾಳಿ ಬಳಿಕ ಉಭಯ ದೇಶಗಳ ನಡುವೆ ಪಂದ್ಯಗಳು ನಡೆಯುವುದು ಅನುಮಾನ ಎನ್ನಲಾಗಿತ್ತು. ಇದೀಗ ಮೂವರ ಕ್ರಿಕೆಟಿಗರ ಹತ್ಯೆ ಬೆನ್ನಲ್ಲೇ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.