ಬೆಂಗಳೂರಿನ ಈ ಭಾಗವೇ ಟ್ರಾಫಿಕ್‌ಗೆ ಕುಖ್ಯಾತ: ವೈರಲ್ ಆದ ಪೋಸ್ಟ್ ಹೇಳಿದ್ದೇನು?

ಬೆಂಗಳೂರು: ಟ್ರಾಫಿಕ್ ಟ್ರಾಫಿಕ್ ಟ್ರಾಫಿಕ್ ಹೀಗೆನ್ನುತ್ತಿದ್ದಂತೆ ಕಣ್ಣ ಮುಂದೆ ಬರುವುದೇ ಬೆಂಗಳೂರು . ಮಾಯಾನಗರಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೌದು, ಬೆಳಗ್ಗೆ ಕೆಲಸ ಹೋಗುವ ಮತ್ತು ಸಂಜೆ ಕೆಲಸದಿಂದ ವಾಪಸ್ ಆಗುವಂತಹ ಪೀಕ್ ಟೈಮ್‌ಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಹೀಗಾಗಿ ವಾಹನ ಸವಾರರಂತೂ ಈ ಟ್ರಾಫಿಕ್‌ನಲ್ಲಿ ಸಿಲುಕಿ ಸುಸ್ತಾಗಿ ಹೋಗ್ತಾರೆ. ಇದೀಗ ವೈರಲ್ ಆಗಿರುವ ಪೋಸ್ಟ್ ಬೆಂಗಳೂರಿನ ಸುಧಾರಿತ ಸಾರ್ವಜನಿಕ ಸಾರಿಗೆ ಅಗತ್ಯತೆಯನ್ನು ಎತ್ತಿ ತೋರಿಸುತ್ತಿದೆ. ಪೂರ್ವ ಹಾಗೂ ಪಶ್ಚಿಮ ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿನ ವ್ಯತ್ಯಾಸವು ಹೊಸ ಚರ್ಚೆಗೆ ನಾಂದಿ ಹಾಡಿದೆ. ಎರಡು ಭಾಗವು ಬೆಂಗಳೂರಿಗೆ ಸೇರಿದ್ರು ಟ್ರಾಫಿಕ್ ಜಾಮ್ ಹೇಗಿರುತ್ತದೆ ಎನ್ನುವುದನ್ನು ಗೂಗಲ್ ಮ್ಯಾಪ್‌ನ ಸ್ಕ್ರೀನ್ ಶಾಟ್ ಎತ್ತಿ ತೋರಿಸುತ್ತಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಪಶ್ಚಿಮ ಬೆಂಗಳೂರಿನಲ್ಲಿ ನೆಲೆಸಿರುವವರು ನಿಜಕ್ಕೂ ಸೇಫ್ ಎನ್ನುತ್ತಿದ್ದಾರೆ.

ಪ್ಲಸ್ ಆಫ್ ಬೆಂಗಳೂರು (PluseOfBengaluru) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡದಲಾದ ಪೋಸ್ಟ್ ನಲ್ಲಿ ಗೂಗಲ್ ಮ್ಯಾಪ್ ಸ್ಕ್ರೀನ್ ಶಾಟ್‌ನಲ್ಲಿ ಪೂರ್ವ ಹಾಗೂ ಪಶ್ಚಿಮ ಬೆಂಗಳೂರಿನ ಸಂಚಾರ ದಟ್ಟಣೆ ಹೇಗಿದೆ ಎಂದು ನೋಡಬಹುದು. ಪೂರ್ವ ಬೆಂಗಳೂರು ಸಂಚಾರ ದಟ್ಟಣೆಯಿಂದ ಗಾಢ ಕೆಂಪು ಬಣ್ಣದಲ್ಲಿ ಗುರುತಿಸಲ್ಪಟ್ಟಿದ್ದರೆ, ಪಶ್ಚಿಮ ಬೆಂಗಳೂರು ಸಂಪೂರ್ಣವಾಗಿ ಹಸಿರು ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಮುಕ್ತ ಸಂಚಾರವನ್ನು ಹೊಂದಿದೆ. ಪಶ್ಚಿಮ ಬೆಂಗಳೂರಿನ ರಾಜಾಜಿನಗರ, ವಿಜಯನಗರ ಮತ್ತು ಕೆಂಗೇರಿಯಂತಹ ಭಾಗಗಳಲ್ಲಿ ಸಂಚಾರ ದಟ್ಟಣೆ ಅಷ್ಟಿಲ್ಲದಿದ್ದರೂ ವೈಟ್‌ಫೀಲ್ಡ್, ಕೆಆರ್ ಪುರಂ ಮತ್ತು ಮಾರತಹಳ್ಳಿಯಂತಹ ಪ್ರದೇಶಗಳಲ್ಲಿ ದೈನಂದಿನ ದಟ್ಟಣೆಯೂ ಹೆಚ್ಚಿದೆ.
