ಇದು ಸಣ್ಣ ಪುಟ್ಟ ಸಮಸ್ಯೆ ಅಂತೆ!’ – ಮಹಾ ಮಳೆಯಲ್ಲಿ ಮುಳುಗಿದ ಬೆಂಗಳೂರು,ಬಿಬಿಎಂಪಿ ಆಯುಕ್ತರ ಉಡಾಫೆ ಮಾತಿಗೆ ಜನರ ಕೆಂಗಣ್ಣು

ಬೆಂಗಳೂರು: ಬೆಂಗಳೂರಿನ ಸುರಿದ ಮಹಾ ಮಳೆಗೆ ಸಾಲು ಸಾಲು ಅನಾಹುತಗಳು ಸಂಭವಿಸಿದೆ. ಮನೆಗಳಿಗೆ ನೀರು ನುಗ್ಗಿದ್ದರೆ, ಮತ್ತೊಂದಡೆ ವಾಹನಗಳು ನೀರಿನಲ್ಲಿ ತೇಲಾಡಿವೆ. ಇದರಿಂದ ಜನರು ಪರದಾಡುತ್ತಿದ್ದಾರೆ. ಪ್ರತಿ ಬಾರಿಯೂ ಭಾರಿ ಮಳೆಯಾದಗ ಇದೇ ಸ್ಥಿತಿ ನಿರ್ಮಾಣವಾಗುತ್ತಿದ್ದು, ಬಿಬಿಎಂಪಿ ಇದನ್ನು ಪರಿಹರಿಸುತ್ತಿಲ್ಲ ಎಂದು ಜನರು ಗೋಳಾಡುತ್ತಿದ್ದಾರೆ. ಆದ್ರೆ, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆ ಆಗುವಾಗ ಸಣ್ಣಪುಟ್ಟ ಸಮಸ್ಯೆ ಆಗೇ ಆಗುತ್ತೆ ಎಂದು ಉಡಾಫೆ ಮಾತುಗಳನ್ನಾಡಿದ್ದಾರೆ. ಇದರೊಂದಿಗೆ ಸಂತ್ರಸ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಳೆ ಸಂಬಂಧ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಬಿಬಿಎಂಪಿ ಚೀಫ್ ಕಮಿಷನರ್ ಮಹೇಶ್ವರ್ ರಾವ್, ಬೆಂಗಳೂರಲ್ಲಿ ನಿನ್ನೆ (ಮೇ 18) ರಾತ್ರಿ ಇಡೀ ಭಾರೀ ಮಳೆಯಾಗಿದೆ. ಕಳೆದೊಂದು ದಶಕಗಳಲ್ಲಿ ಇದೇ ಅತಿ ಹೆಚ್ಚು ಮಳೆಯಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆ ಆಗುವಾಗ ಸಣ್ಣಪುಟ್ಟ ಸಮಸ್ಯೆ ಆಗೇ ಆಗುತ್ತೆ. ನಮ್ಮ ತಂಡ ಎಲ್ಲಾ ಕಡೆಗಳಲ್ಲಿ ಕೆಲಸ ಮಾಡಿಕೊಂಡಿದೆ. ಎರಡ್ಮೂರು ಜಾಗದಲ್ಲಿ ಶಾಶ್ವತ ಪರಿಹಾರ ಬೇಕೇ ಬೇಕು. ಅದನ್ನು ನಾವು ಪತ್ತೆ ಮಾಡಿದ್ದೇವೆ, ಕೆಲಸ ಕೂಡ ಶುರುವಾಗಿದ್ದು, 206 ಸೂಕ್ಷ್ಮ ಪ್ರದೇಶಗಳನ್ನು ಪತ್ತೆ ಹಚ್ಚಿ ಹಲವು ಕಡೆಗಳಲ್ಲಿ ಪರಿಹಾರ ನೀಡಿದ್ದೇವೆ. ಇನ್ನೂ ಕೆಲವು ಕಡೆಗಳಲ್ಲಿ ಮಾತ್ರ ಕೆಲಸ ಬಾಕಿ ಇದೆ ಎಂದರು.
ಜಲಮಂಡಳಿ, ಅಗ್ನಿ ಶಾಮಕ ದಳದ ಸಹಾಯದೊಂದಿಗೆ ಕೆಲಸ ಮಾಡುತ್ತಿದ್ದೇವೆ . ಸಾಯಿ ಲೇಔಟ್ ನಲ್ಲಿ ಡ್ರೈನೇಜ್ ವ್ಯವಸ್ಥೆ ಮತ್ತಷ್ಟು ವಿಶಾಲ ಮಾಡುತ್ತೇವೆ. ಎಲ್ಲೆಲ್ಲಿಂದ ನೀರು ಬಂತು ಅಂತ ಪತ್ತೆ ಮಾಡಿ ಸೀಲ್ ಡೌನ್ ಮಾಡುತ್ತೇವೆ. ಜನರಿಗೆ ತೊಂದರೆಗೆ ಪರಿಹಾರ ನೀಡಿವುದು ನಮ್ಮ ಸದ್ಯದ ಆದ್ಯತೆ. ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ, ಮಡಿವಾಳ ಕೆರೆಯಿಂದ ಇಲ್ಲಿಗೆ ನೀರು ಹರಿದು ಬರುತ್ತಿದೆ. ಅದಕ್ಕೊಂದು ಪರಿಹಾರ ನೀಡುವ ಪ್ಲ್ಯಾನ್ ನಡೆಯುತ್ತಿದೆ. SWD ಹೂಳೆತ್ತುವೆ ಕೆಲಸ ಪ್ರಗತಿಯಲ್ಲಿದೆ. ಅದು ನಿರಂತರವಾಗಿ ನಡೆಯುವ ಕೆಲಸವಾಗಿದ್ದು, ಅದು ಮುಂದುವರೆಯುತ್ತೆ. ರಾಜಕಾಲುವೆ ಒತ್ತುವರಿ ತೆರವು ಮಾಡುವ ಕೆಲಸ ನಡೆಯುತ್ತಿದೆ. ನಮ್ಮ ಅಧಿಕಾರಿಗಳು ಸ್ಥಳದಲ್ಲಿ ನಿರಂತರ ಕೆಲಸ ಮಾಡುತ್ತಿದ್ದಾರೆ. ಮಳೆಗಾಲದ ಸಮಸ್ಯೆಗೆ ಎಲ್ಲಾ ಪರಿಹಾರ ಒದಗಿಸಲು ಪ್ರಾಮಾಣಿಕ ವಾಗಿ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.
ಸಿಎಂ, ಡಿಸಿಎಂ ಬೆಂಗಳೂರು ಸಿಟಿ ರೌಂಡ್ಸ್
ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ನಿವಾಸಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಧಾರಾಕಾರವಾಗಿ ಸುರಿದ ಭಾರೀ ಮಳೆಯಿಂದ ಮನೆಗಳಿಗೆ ನೀರು ನುಗಿದ ಪರಿಣಾಮ ಸಾಕಷ್ಟು ಬಡಾವಣೆ ಜನರ ಜೀವನ ಅಸ್ತವ್ಯಸ್ತವಾಗಿದ್ದು, ಈ ಸಂಬಂಧ ಪರಿಸ್ಥತಿಯನ್ನು ಅವಲೋಕಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ರೌಂಡ್ಸ್ ಹಾಕಲಿದ್ದಾರೆ. ಇಂದು ಸಂಜೆ ಬಿಬಿಎಂಪಿ ಅಧಿಕಾರಿಗಳ ಜತೆ ಸಿಎಂ, ಡಿಎಸಿಂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಮಾನ್ಯತಾ ಟೆಕ್ಪಾರ್ಕ್, ಸಾಯಿಲೇಔಟ್, HSR ಲೇಔಟ್, ಈಜಿಪುರ ಜಂಕ್ಷನ್ ಹಾಗೂ ಸಿಲ್ಕ್ ಬೋರ್ಡ್ ಸಿಗ್ನಲ್ ಹಾಗೂ BBMP ಕಂಟ್ರೋಲ್ ರೂಂಗೆ ಭೇಟಿ ನೀಡಲಿದ್ದಾರೆ. ಬಳಿಕ ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ.
